ಗಂಗಾವತಿ: ನಗರದಲ್ಲಿರುವ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಪಡೆಯಲು ಯಾರೂ ಹೋಗಬಾರದು. ಹೋದರೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದೆ. ಹೀಗೆಂದು ಸಾರ್ವಜನಿಕರಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಸರ್ಕಾರಿ ಆಸ್ಪತ್ರೆಗೆ ಹೋದರೆ ಕೊರೊನಾ ಬರುತ್ತೆ... ಗಂಗಾವತಿಯಲ್ಲಿ ಅಪಪ್ರಚಾರ!
ಗಂಗಾವತಿ ನಗರದಲ್ಲಿರುವ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಹೋದರೆ ಕೊರೊನಾ ಬರುತ್ತೆ ಎಂದು ಸಾರ್ವಜನಿಕರಲ್ಲಿ ಅಪಪ್ರಚಾರ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಅತ್ಯಾಧುನಿಕ ಯಂತ್ರೋಪಕರಣಗಳ ಚಿಕಿತ್ಸೆ, ಗುಣಮಟ್ಟದ ಸೇವೆಯಿಂದ ಈ ಆಸ್ಪತ್ರೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಒಂದೇ ಆಸ್ಪತ್ರೆಯನ್ನು ಪ್ರತ್ಯೇಕವಾಗಿ ವಿಭಜಿಸಿ ಕೋವಿಡ್ ಮತ್ತು ನಾನ್ ಕೋವಿಡ್ ಚಿಕಿತ್ಸಾ ಸೇವೆಯನ್ನು ನೀಡಲಾಗುತ್ತಿದೆ. ಕೊರೊನಾ ಸೋಂಕಿತರು ಪ್ರವೇಶಿಸುವ ಮತ್ತು ನಿರ್ಗಮಿಸುವ ದಾರಿ ಸೇರಿದಂತೆ ಆಸ್ಪತ್ರೆಯಲ್ಲಿ ಪ್ರತಿಯೊಂದನ್ನು ಪ್ರತ್ಯೇಕವಾಗಿ ವಿಭಜಿಸಲಾಗಿದೆ. ಇನ್ನು ಸಾಮಾನ್ಯ ಕಾಯಿಲೆಗಳಿಗೆ ಎಂದು ಆಸ್ಪತ್ರೆಗೆ ಬರುವ ಜನರಿಗೆ ಪ್ರತ್ಯೇಕ ದಾರಿ, ಚಿಕಿತ್ಸಾ ಏರ್ಪಾಡುಗಳನ್ನೂ ಸಹ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಚಿಕಿತ್ಸೆಯಿಂದಾಗಿ ಬಹುತೇಕ ಜನ ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುವುದನ್ನು ಮರೆತಿದ್ದಾರೆ. ಇದೇ ಕಾರಣಕ್ಕೆ ಕೆಲವರು ಕೊರೊನಾ ನೆಪ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಈಶ್ವರ ಸವಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.