ಕೊಪ್ಪಳ: ರಾಜ್ಯದಲ್ಲಿ ಈಗಾಗಲೇ ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಹೊಸ ಮರಳು ನೀತಿ ಜಾರಿಗೆ ತರಲಾಗಿದೆ, ಮಳೆಯಿಂದಾಗಿ ಅನುಷ್ಠಾನ ವಿಳಂಬವಾಗಿದೆ: ಸಚಿವ ಸಿ.ಸಿ.ಪಾಟೀಲ್
ಹೊಸ ಮರಳು ನೀತಿ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಉಂಟಾದ ವಿಪರೀತ ಮಳೆಯಿಂದಾಗಿ ಜಾರಿಗೆ ತರಲಾದ ಹೊಸ ಮರಳು ನೀತಿಯನ್ನು ಅನುಷ್ಠಾನಕ್ಕೆ ತರಲು ವಿಳಂಬವಾಗಿದೆ ಎಂದಿದ್ದಾರೆ.
ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದ ಹಿನ್ನೆಲೆ ಮರಳು ನೀತಿ ಅನುಷ್ಠಾನಗೊಳಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ. ಈ ಭಾಗವನ್ನು ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿಗೆ ನೀಡಲಾಗಿದ್ದು, ಆರಂಭಿಕ ಹಂತದ ಹಳ್ಳ-ಕೊಳ್ಳ, ತೊರೆಯಲ್ಲಿನ ಮರಳು ತೆಗೆಯಲು ಮೂರು ಹಂತ ಮಾಡಲಾಗಿದೆ. ಇದು ಗ್ರಾಮ ಪಂಚಾಯಿತಿಗೂ ಸಹ ಒಂದಿಷ್ಟು ಆದಾಯ ತರುವುದರ ಜೊತೆಗೆ ಬಳಕೆದಾರರಿಗೆ ಹೊರೆಯಾಗದ ರೀತಿಯಲ್ಲಿ ಲಭ್ಯವಾಗಲಿದೆ ಎಂದರು.
ಇನ್ನು ಅಕ್ರಮ ಮರಳು ದಂಧೆಗೆ ಸಾಥ್ ನೀಡುವ ಮೂಲಕ ಗಂಗಾವತಿ ತಹಶೀಲ್ದಾರ್ ಲಂಚ ಪಡೆದ ಆರೋಪ ಪ್ರಕರಣವನ್ನು ಅಧಿಕಾರಿಗಳ ಮೂಲಕ ತನಿಖೆ ನಡೆಸಲಾಗುತ್ತಿದೆ ಎಂದು ಇದೇ ವೇಳೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.