ಗಂಗಾವತಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದುಕೊಳ್ಳದೆ ಮತ್ತು ರಾಜ್ಯ ಸರ್ಕಾರಕ್ಕೆ ತೆರಿಗೆ ಪಾವತಿಸದೆ ಅಕ್ರಮವಾಗಿ ಸುಮಾರು 1.85 ಕೋಟಿ ಮೌಲ್ಯದ ಮರಳನ್ನು ಸಾಗಾಣಿಕೆ ಮಾಡಿದ ಪ್ರಕರಣದಲ್ಲಿ ಒಟ್ಟು 36 ಜನ ರೈತರ ಮೇಲೆ ದೂರು ದಾಖಲಾಗಿದೆ.
ಕನಕಗಿರಿ ತಾಲೂಕಿನ ಕ್ಯಾರಿಹಾಳ, ಬುನ್ನಟ್ಟಿ, ಯತ್ನಟ್ಟಿ, ನವಲಿ ಹಾಗೂ ಉದ್ಯಾಳ ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಒಟ್ಟು ನಾಲ್ಕು ಪ್ರಕರಣಗಳಲ್ಲಿ 36 ರೈತರ ವಿರುದ್ಧ ದೂರು ದಾಖಲಾಗಿದ್ದು, ಇದರಲ್ಲಿ 8 ಜನ ಮಹಿಳಾ ರೈತರಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ವಿಜ್ಞಾನಿ ಸನಿತ್ ಎಂಬುವರು ನೀಡಿದ ದೂರಿನ ಮೇರೆಗೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಒಟ್ಟು ಪ್ರತ್ಯೇಕ ನಾಲ್ಕು ಪ್ರಕರಣ ದಾಖಲಾಗಿವೆ. ಐಪಿಸಿ ಸೆಕ್ಷನ್ 379 (ನೈಸರ್ಗಿಕ ಸಂಪನ್ಮೂಲ ಕಳ್ಳತನ), ಐಪಿಸಿ 34 (ಅಕ್ರಮ ಕೂಟ ರಚನೆ) ಹಾಗೂ (ಐಪಿಸಿ 420) ವಂಚನೆ ದೂರಿನಡಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮೊದಲು ನ. 6ರಂದು ಒಂದು ಕೋಟಿ ಮೌಲ್ಯಕ್ಕೂ ಹೆಚ್ಚು ಪ್ರಮಾಣದ ಮರಳನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡಲಾಗಿದೆ ಎಂದು ದೂರಿ ನಾಲ್ವರು ರೈತರ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೊಂದು ಸುತ್ತಿನಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಓದಿ:ಒಂದು ಕೋಟಿ ಮೌಲ್ಯದ ಮರಳು ಅಕ್ರಮ ಸಾಗಣಿಕೆ.. ನಾಲ್ವರು ರೈತರ ವಿರುದ್ಧ ದೂರು