ಗಂಗಾವತಿ:ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕಂದಾಯ ಇಲಾಖೆಯ ಅಧಿಕಾರಿಗಳು, ವಾಹನ ಜಪ್ತಿ ಮಾಡಿ ಗಣಿ ಮತು ಭೂ ವಿಜ್ಞಾನ ಇಲಾಖೆಯಿಂದ ರೂ. 19,240 ರೂಪಾಯಿ ದಂಡ ಹಾಕಿಸಿದ್ದಾರೆ.
ತಾಲೂಕಿನ ಸಂಗಾಪುರ ಗ್ರಾಮ ಸೀಮೆಯ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಹೇರಿಕೊಂಡು ಮಿನಿ ವಿಧಾನಸೌಧದ ಮುಂಭಾಗದ ರಸ್ತೆಯಿಂದ ಬರುತ್ತಿದ್ದ ವಾಹನವನ್ನು ಪತ್ತೆ ಹಚ್ಚಿದ ಕಂದಾಯ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ತಪಾಸಣೆ ವೇಳೆ ಮರಳು ಸಾಗಾಣಿಕೆಗೆ ಯಾವುದೇ ಅನುಮತಿ ಪಡೆಯದಿರುವುದು ಹಾಗೂ ಸರ್ಕಾರಕ್ಕೆ ತೆರಿಗೆ ಪಾವತಿಸದೇ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆ ತಹಶೀಲ್ದಾರ್ ರೇಣುಕಾ ದಾಳಿ ಮಾಡಿದ್ದಾರೆ.
ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸುಪರ್ದಿಗೆ ವಹಿಸಿದ್ದರಿಂದ ಒಂದು ಟ್ರ್ಯಾಕ್ಟರ್ ಮರಳು ಅಕ್ರಮವಾಗಿ ಸಾಗಿಸುತ್ತಿದ್ದ ಕೊಟ್ಟೂರೇಶ್ವರ ಕ್ಯಾಂಪಿನ ಮೊಹಮ್ಮದ್ ಚಾವೂಸಾ ಎಂಬ ವ್ಯಕ್ತಿಗೆ ಸೇರಿದ ವಾಹನಕ್ಕೆ ರೂ. 19,240 ರೂಪಾಯಿ ದಂಡ ವಿಧಿಸಲಾಗಿದೆ.