ಕೊಪ್ಪಳ: ಜಿಲ್ಲೆಯ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗಿದೆ. ಇದರ ಜೊತೆಗೆ ಪಟ್ಟಾ ಭೂಮಿಯಲ್ಲಿಯೂ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿದೆ. ಪಟ್ಟಾ ಭೂಮಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಕೊಪ್ಪಳ ಉಪವಿಭಾಗಾಧಿಕಾರಿಗಳು ಹೊಸದೊಂದು ಪ್ಲಾನ್ ಮಾಡಿದ್ದಾರೆ.
ಹೌದು, ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಬೀಳುತ್ತಿಲ್ಲ. ಇದರ ಜೊತೆಗೆ ಜಿಲ್ಲೆಯಲ್ಲಿ ಕೆಲವರು ಪಟ್ಟಾ ಭೂಮಿಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಪಟ್ಟಾ ಭೂಮಿಯಲ್ಲಿ ಮರಳು ಗಣಿಗಾರಿಕೆ ನಡೆಸಲು ನಿಯಮಗಳ ಪ್ರಕಾರ ಅನುನತಿ ಪಡೆಯಬೇಕು ಹಾಗೂ ರಾಜಧನ ಪಾವತಿಸಬೇಕು. ಆದರೆ, ಇದ್ಯಾವುದನ್ನು ಮಾಡದೆ ಅನೇಕರು ತಮ್ಮ ಪಟ್ಟಾ ಭೂಮಿಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಚಟುವಟಿಕೆಗೆ ಕಡಿವಾಣ ಹಾಕಲು ಕೊಪ್ಪಳ ಉಪವಿಭಾಗಾಧಿಕಾರಿ ಮಾಸ್ಟರ್ ಪ್ಲಾನ್ ರೂಪಿಸಿ ಅದನ್ನು ಕಾರ್ಯಗತ ಮಾಡಿದ್ದಾರೆ.
ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅನುಮತಿ ಪಡೆಯದೇ ಹಾಗೂ ರಾಜಧನ ಪಾವತಿಸದೆ ಪಟ್ಟಾ ಭೂಮಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿರುವ ಜಿಲ್ಲೆಯ 6 ಕ್ಕೂ ಹೆಚ್ಚು ಜನರಿಗೆ ದೊಡ್ಡ ಪ್ರಮಾಣದ ದಂಡ ಹಾಕಿ ಶಾಕ್ ನೀಡಿದ್ದಾರೆ. ಅಷ್ಟೆ ಅಲ್ಲದೇ ಅವರ ಭೂಮಿಯ ಪಹಣಿ ಪತ್ರಿಕೆಯ ಭೋಜ ನಮೂದಿಸಿದ್ದಾರೆ.
ದಂಡದ ಮೊತ್ತವನ್ನು ಆ ಜಮೀನಿನ ಪಹಣಿ ಪತ್ರಿಕೆಯ ಕಾಲಂ ನಂಬರ್ 11 ರಲ್ಲಿ ನಮೂದಿಸಲಾಗುತ್ತದೆ. ಇದರಿಂದ ಸಹಜವಾಗಿ ಆ ಪಹಣಿಯಲ್ಲಿ ದಂಡದ ಮೊತ್ತ ಕಂಡು ಬರಲಿದೆ. ಹೀಗೆ ಯಾವುದೇ ಅನುಮತಿ ಹಾಗೂ ರಾಜಧನ ಪಾವತಿಸದೇ ಪಟ್ಟಾ ಜಮೀನಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿದ ಜಿಲ್ಲೆಯ ಕನಕಗಿರಿ ತಾಲೂಕಿನ ಬುನ್ನಟ್ಟಿ, ಕರಡೋಣ, ಕಾಟಾಪುರಕೆರೆ, ಉದ್ದಿಹಾಳ, ಶಿರವಾರ ಸೇರಿದಂತೆ ಜಿಲ್ಲೆಯ ಇನ್ನಿತರ ಕಡೆ ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಅಕ್ರಮವಾಗಿ ಪಟ್ಟಾಭೂಮಿಯಲ್ಲಿ ಮರಳುಗಣಿಗಾರಿಕೆ ನಡೆಸಿರೋದು ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು 6 ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಲಾಗಿದೆ.
ಎರಡು ಪ್ರಕರಣಗಳಲ್ಲಿ ಸುಮಾರು 2 ಕೋಟಿ ರುಪಾಯಿಯವರೆಗೂ ದಂಡ ವಿಧಿಸಿ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರು ಆದೇಶ ಮಾಡಿದ್ದಾರೆ. ಈ ಪ್ರಕರಣಗಳಲ್ಲಿ ಸುಮಾರು 5 ಕೋಟಿ ರುಪಾಯಿಗೂ ಅಧಿಕ ಮೊತ್ತದ ದಂಡ ವಿಧಿಸಲಾಗಿದ್ದು, ಜೊತೆಗೆ ಆ ಜಮೀನುಗಳ ಪಹಣಿಯ ಕಾಲಂ ನಂಬರ್ 11 ರಲ್ಲಿ ಭೋಜ ನಮೂದಿಸಲಾಗಿದೆ. ದಂಡ ವಸೂಲಾತಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಒಂದು ವೇಳೆ ದಂಡ ಪಾವತಿಸದಿದ್ದರೆ ಜಮೀನು ಸರ್ಕಾರದ ವಶಕ್ಕೆ ಪಡೆಯುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರು ಹೇಳಿದ್ದಾರೆ.
ಕೊಪ್ಪಳ ತಾಲೂಕು ಸೇರಿದಂತೆ ಜಿಲ್ಲೆಯ ಅನೇಕ ಕಡೆ ಪಟ್ಟಾ ಭೂಮಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಾಕಷ್ಟಿದೆ. ಈಗ ಕೈಗೊಳ್ಳಲಾಗಿರುವ ಆದೇಶ ಎಚ್ಚರಿಕೆಯ ಗಂಟೆಯಾಗಿದೆ. ಆದರೆ, ಆದೇಶದಂತೆ ದಂಡ ಕಕ್ಕಿಸುವ ಮೂಲಕ ಅಕ್ರಮಕ್ಕೆ ಬ್ರೇಕ್ ಹಾಕುವುದು ಸಹ ಅಷ್ಟೆ ಈಗ ಮಹತ್ವವಾಗಿದೆ. ಇದು ಕಟ್ಟುನಿಟ್ಟಾಗಿ ಮುಂದುವರೆಯುತ್ತದೆಯಾ ಮತ್ತು ಇದರ ಜೊತೆಗೆ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಗೆ ಬ್ರೇಕ್ ಬೀಳುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.