ಗಂಗಾವತಿ:ತಾಲೂಕಿನ ಆನೆಗುಂದಿ ಹೋಬಳಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ರೆಸಾರ್ಟ್ಗಳ ಮೇಲೆ ನಿಯಮಾನುಸಾರ 48 ಗಂಟೆಯೊಳಗೆ ಕ್ರಮ ಕೈಗೊಂಡು, ವರದಿ ನೀಡುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಗಂಗಾವತಿ ತಹಶೀಲ್ದಾರ್‌ಗೆ ಗಡುವು ನೀಡಿದ್ದಾರೆ.
ಅಕ್ರಮ ರೆಸಾರ್ಟ್: ಕ್ರಮ ಜರುಗಿಸಲು ಗಂಗಾವತಿ ತಹಶೀಲ್ದಾರ್‌ಗೆ 48 ಗಂಟೆ ಗಡುವು
ಅನಧಿಕೃತವಾಗಿ ತಲೆಯೆತ್ತಿರುವ ರೆಸಾರ್ಟ್ಗಳ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳದೇ ಹೋದಲ್ಲಿ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಗಂಗಾವತಿ ತಹಶೀಲ್ದಾರ್ ನಾಗರಾಜ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ತಹಶೀಲ್ದಾರ್‌ಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿ, ಮೂರು ತಿಂಗಳ ಹಿಂದೆಯೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಪಟ್ಟಾಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ರೆಸಾರ್ಟ್ಗಳ ವಿದ್ಯುತ್ ಸಂಪರ್ಕ ಕಡಿತ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ನಿಗಧಿತ ಅವಧಿಯೊಳಗೆ ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.