ಕೊಪ್ಪಳ :ಜಿಲ್ಲಾ ಉಸ್ತುವಾರಿ ಸಚಿವರು ಎರಡು ದಿನ ಜಿಲ್ಲೆಗೆ ಬಂದು ಮೊದಲ ದಿನ ವಸೂಲಿ ಮಾಡುತ್ತಾರೆ ಹಾಗೂ 2ನೇ ದಿನ ಸಭೆ ನಡೆಸಿ ಓಡಿ ಹೋಗ್ತಾರೆ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ.
ತೈಲ ಬೆಲೆ ಏರಿಕೆ ವಿರುದ್ಧ ಕಿರಿಕಾರಿದ ತಂಗಡಗಿ, ನಮ್ಮ ಪ್ರತಿಭಟನೆಗೆ ಸರ್ಕಾರ ಮಣಿಯದಿದ್ದರೆ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸುತ್ತೇವೆ. ಮುಂದಿನ ದಿನಗಳಲ್ಲಿ ಬಿಜೆಪಿಯವರನ್ನು ಜನರು ಹೊಡೆದು ಓಡಿಸುವ ಪರಿಸ್ಥಿತಿ ಬರುತ್ತದೆ ಎಂದು ಶಿವರಾಜ್ ತಂಗಡಗಿ ಹೇಳಿದರು.
ಪ್ರತಿಭಟನೆಗೆ ಸರ್ಕಾರ ಮಣಿಯದಿದ್ದರೆ ಹೋರಾಟ ತೀವ್ರ.. ಮಾಜಿ ಸಚಿವ ತಂಗಡಗಿ ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಓಪನ್ನಾಗಿ ವಸೂಲಿಗೆ ನಿಂತಿದ್ದಾರೆ. ಈ ಬಗ್ಗೆ ಜನರು ಹೇಳುತ್ತಿಲ್ಲ. ಆದರೆ, ನಾವು ಹೇಳುತ್ತಿದ್ದೇವೆ.
ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಹೇಳಿ ಪೊಲೀಸರು ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟಪಡಿಸಬೇಕು. ಮಾಧ್ಯಮಗಳ ಮುಂದೆ ಬಂದು ಹೇಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದು ಮೊದಲ ದಿನ ವಸೂಲಿ ಮಾಡುತ್ತಾರೆ, 2ನೇ ದಿನ ಸಭೆ ಮಾಡಿ ಓಡಿ ಹೋಗುತ್ತಾರೆ. ಈ ವಿಷಯವನ್ನು ಬಿಜೆಪಿ ಕಾರ್ಯಕರ್ತರೇ ನಮಗೆ ಹೇಳುತ್ತಿದ್ದಾರೆ. ಆದರೆ, ಇದನ್ನು ನಾನು ಪ್ರೂವ್ ಮಾಡು ಅಂದರೆ ಮಾಡುವೆ ಎಂದರು.
ಈ ಹಿಂದೆ 4 ಕೋಟಿ ರೂ. ಎತ್ತುವಳಿಯನ್ನು ಪ್ರೂವ್ ಮಾಡಿರುವೆ. 4 ಕೋಟಿ ರೂ. ಎತ್ತುವಳಿ ಕುರಿತಂತೆ ತನಿಖೆಗೆ ಆಗ್ರಹಿಸಿದಾಗ ಜಿಲ್ಲಾ ಪಂಚಾಯತ್ ಸಿಇಒ ಅವರು ತನಿಖೆ ನಡೆಸಿ ನಾಲ್ವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಒಬ್ಬ ಅಧಿಕಾರಿ ಮೇಲೆ ಕೇಸ್ ಮಾಡಿಲ್ಲ ಹಾಗೂ ಆತನನ್ನು ಅರೆಸ್ಟ್ ಮಾಡಿಲ್ಲ ಎಂದು ಹೇಳಿದರು.
ಜಿಲ್ಲೆ, ರಾಜ್ಯ, ದೇಶದಲ್ಲಿ ತುಘಲಕ್ ದರ್ಬಾರ್ ನಡೆದಿದೆ. ಬಿಜೆಪಿ ಸರ್ಕಾರ ಅಂದ್ರೆ ಧರ್ಮ, ಜಾತಿ ಒಡೆಯುವುದು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆರೋಪಿಸಿದರು. 1 ಬ್ಯಾರೆಲ್ ತೈಲಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 108 ಡಾಲರ್ ಇದ್ದಾಗ 71 ರೂಪಾಯಿ ಡೀಸೆಲ್ ಬೆಲೆ ಇತ್ತು. ಈಗ ಬ್ಯಾರೆಲ್ ತೈಲಕ್ಕೆ 38 ಡಾಲರ್ ಇದೆ. ಆದರೆ, ಒಂದು ಲೀಟರ್ ಡೀಸೆಲ್‌ಗೆ 84 ರೂಪಾಯಿ ಇದೆ. ಬರೀ ಸುಳ್ಳು ಹೇಳಿ, ಭಾಷಣ ಮಾಡುತ್ತಿರೋ ಅಥವಾ ಜನರ ಸಂಕಷ್ಟಕ್ಕೆ ನೆರವಾಗುತ್ತೀರೋ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ಪಕ್ಷ ಪ್ರತಿಭಟನೆ ಧರಣಿ ನಡೆಸಿದೆ ಎಂದರು.