ಕೊಪ್ಪಳ:ನಾನು ಸಿಎಂ ಆಗಿ ಕೊಪ್ಪಳಕ್ಕೆ ಬಂದಿಲ್ಲ. ನಿಮ್ಮ ಮನೆಯ ಮಗನಾಗಿ ಬಂದಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಿರ್ಮಾಣಗೊಂಡ ನೂರು ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಹನುಮಸಾಗರದ ಸಮುದಾಯ ಆರೋಗ್ಯ ಕೇಂದ್ರ ಸೇರಿ ನಾನಾ ಕಾಮಗಾರಿ ಉದ್ಘಾಟಿಸಿ, ಮತ್ತೊಮ್ಮೆ ನಿಮ್ಮ ಸೇವೆ ಮಾಡುವ ಅವಕಾಶ ಕೊಡಬೇಕೆಂದು ಜನರಲ್ಲಿ ಕೋರಿದರು.
ಕೊಪ್ಪಳ ಕ್ಷೇತ್ರಕ್ಕೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಅಗತ್ಯವಿತ್ತು. ಕಲ್ಯಾಣ ಕರ್ನಾಟಕದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕಾಗಿ ನಮ್ಮ ಸರ್ಕಾರ ವಿಶೇಷ ಪ್ರಾತಿನಿಧ್ಯ ನೀಡಿದೆ. ಈ ಹಿಂದೆ ನಾನು ನೀರಾವರಿ ಸಚಿವನಿದ್ದಾಗ ಕೊಪ್ಪಳ ಏತ ನೀರಾವರಿ ಕುರಿತು ದಿಟ್ಟ ನಿರ್ಧಾರ ಕೈಗೊಂಡೆ. ಆ ಯೋಜನೆ ಪ್ರಾರಂಭವಾಯಿತು. ನೀರಾವರಿ ಯೋಜನೆಗಳು ರೈತರಿಗೆ ಸಮರ್ಪಕವಾಗಿ ಮುಟ್ಟಬೇಕು. ಕೃಷಿಕನಿಗೆ ನೀರು ಕೊಟ್ಟರೆ ಈ ಭಾಗದ ರೈತ ಬಂಗಾರ ಬೆಳೆದುಕೊಡುತ್ತಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ 40 ಕೋಟಿ ರೂ ಅನುದಾನ ಮೀಸಲಿಡಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿಗೆ ಭರವಸೆ, ಕೊಪ್ಪಳ ಸಿಂಗಟಾಲೂರು ಏತ ನೀರಾವರಿಗೆ ಆದ್ಯತೆ, ಕೈಗಾರಿಕಾ ಸಮ್ಮೇಳನ ನಡೆಸುವ ಇಂಗಿತವನ್ನು ಸಿಎಂ ಬೊಮ್ಮಾಯಿ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಕನ್ನಡವನ್ನು ಇನ್ನೊಂದು ಭಾಷೆಯ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ : ಸಿ. ಟಿ ರವಿ