ಕೊಪ್ಪಳ: ನಾನು ಈ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿ ವಯಸ್ಸಿನ ಆಧಾರದಲ್ಲಿ ಕೆಲವರಿಗೆ ಟಿಕೆಟ್ ತಪ್ಪುವ ಪಟ್ಟಿಯಲ್ಲಿ ಶೆಟ್ಟರ್ ಇದ್ದಾರೆ ಎಂಬ ಚರ್ಚೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತೆರೆ ಎಳೆದಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಈ ದೇಶದ ನಾಯಕರು ಮತ್ತು ವಿಶ್ವದ ನಾಯಕರು. ಕಳೆದ ಎಂಟು ವರ್ಷದಿಂದ ಈ ದೇಶವನ್ನು ಮುನ್ನೆಡೆಸಿ ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಿದ್ದಾರೆ. ನಾಳೆ ಬೆಳಗಾವಿ ಮತ್ತು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ಬೆಳಗಾವಿಯಲ್ಲಿ ನವೀಕೃತ ರೈಲ್ವೆ ನಿಲ್ದಾಣದ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಇಂದಿರಾ ಗಾಂಧಿಯವರು ಚುನಾವಣೆ ಪ್ರಚಾರಕ್ಕೆ ಬಂದಿಲ್ಲವೇ? : ಕಾಂಗ್ರೆಸ್ಸಿನವರಿಗೆ ರಾಜ್ಯ ಸರ್ಕಾರದ ಬಗ್ಗೆ ಟೀಕಿಸಲು ವಿಷಯವಿಲ್ಲ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಇಲ್ಲ ಸಲ್ಲದ ಟೀಕೆಯನ್ನು ಮಾಡುತ್ತಿದ್ದಾರೆ. ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಚುನಾವಣಾ ಪ್ರಚಾರಕ್ಕೆ ಬಂದಿರಲಿಲ್ಲವೇ? ಎಂದು ಶೆಟ್ಟರ್ ಪ್ರಶ್ನಿಸಿದರು.
ರಾಜ್ಯದಲ್ಲಿಯೂ ಬಿಜೆಪಿ ನಾಯಕರು ಸಮರ್ಥರಿದ್ದಾರೆ. ಗುಜರಾತ್ ಮಾದರಿಯಲ್ಲಿ ಹಿರಿಯರಿಗೆ ಟಿಕೆಟ್ ಇಲ್ಲ ಎಂಬುದು ಮಾಧ್ಯಮಗಳಲ್ಲಿನ ಚರ್ಚೆ ಮಾತ್ರ. ಪಕ್ಷದಲ್ಲಿ ಆ ರೀತಿಯ ಚರ್ಚೆಯಾಗಿಲ್ಲ. ಕಾಂಗ್ರೆಸ್ನವರು ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರಿಗೆ ಮತ ಕೇಳಲು ಮುಖವಿಲ್ಲ. ಅವರಲ್ಲಿ ನಾಯಕತ್ವ ಗುಣಗಳಿಲ್ಲ ಎಂದು ಟೀಕಿಸಿದರು.