ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೊಪ್ಪಳ:ಕಾವೇರಿ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ಕರ್ನಾಟಕ ಬಂದ್ಗೆ ಸಂಪೂರ್ಣ ಬೆಂಬಲವಿದೆ. ಬಂದ್ ಶಾಂತಿಯುತವಾಗಿ ನಡೆಯಲಿ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕೊಪ್ಪಳದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಹಾಗೂ ಕಲ್ಯಾಣ ಕರ್ನಾಟಕದವರಿಗೆ ವಿಶಾಲ ಭಾವನೆ ಇದೆ. ಆ ಭಾಗದ ಹೋರಾಟದಲ್ಲಿ ನಮ್ಮವರು ಹೃದಯ ವೈಶಾಲ್ಯತೆ ಹೊಂದಿದ್ದಾರೆ. ಆದರೆ ನಮ್ಮ ಭಾಗದ ಕೃಷ್ಣಾ, ತುಂಗಭದ್ರಾ ನೀರಾವರಿ ಸಮಸ್ಯೆ ಬಂದಾಗ ಮೈಸೂರು ಭಾಗದವರು ನಮ್ಮೊಂದಿಗೆ ಇರಬೇಕು. ಈ ಭಾಗದ ನೆಲ, ಜಲದ ವಿಷಯಕ್ಕೆ ಆ ಭಾಗದವರು ಧ್ವನಿ ಎತ್ತಬೇಕು. ವಿಶಾಲ ಕರ್ನಾಟಕದಲ್ಲಿ ಒಂದೇ ಭಾವನೆ ಬರಬೇಕು. ಎಲ್ಲಾ ಸರ್ಕಾರಗಳಿಗೆ ಉತ್ತರ ಕರ್ನಾಟಕ ಹಾಗೂ ಹಳೆಯ ಮೈಸೂರು ಭಾಗದ ಬಗ್ಗೆ ತಾರತಮ್ಯವಿದೆ. ಇದನ್ನು ಹೋಗಲಾಡಿಸಬೇಕು ಎಂದರು.
ರಾಜ್ಯದಲ್ಲಿ ಡಿಸಿಎಂ ಸ್ಥಾನ ಸಮುದಾಯ ಆಧಾರದಲ್ಲಿದ್ದರೆ ನಮ್ಮ ಸಮಾಜಕ್ಕೆ ನೀಡಿ ಎಂದು ಒತ್ತಾಯಿಸುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿ 11 ಜನ ಪಂಚಮಸಾಲಿ ಸಮಾಜದವರು ಆಯ್ಕೆಯಾಗಿದ್ದಾರೆ. ಅವರಲ್ಲಿ ಒಬ್ಬರಿಗೆ ಡಿಸಿಎಂ ಹುದ್ದೆ ನೀಡಬೇಕೆಂದು ಆಗ್ರಹಿಸಿದರು. ಇದೇ ವೇಳೆ ಬರ ಪರಿಹಾರವನ್ನು ಸರ್ಕಾರ ವಿಳಂಬ ಮಾಡಬಾರದು ಎಂದು ಸ್ವಾಮೀಜಿ ಆಗ್ರಹಿಸಿದರು.
ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದ ನಂತರ ಕೃಷ್ಣಾ ನದಿಗಾಗಿ ಹೋರಾಟ ಮಾಡಲಾಗುವುದು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ, ಇಲ್ಲವೇ ಕೇಂದ್ರದಲ್ಲಿ ಲಿಂಗಾಯತ ಸಮಾಜಕ್ಕೆ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಹಿಂದಿನ ಸರ್ಕಾರದಲ್ಲಿ 2ಡಿ ಮೀಸಲಾತಿ ಘೋಷಣೆಯ ನಂತರ ಚುನಾವಣೆ ನೀತಿ ಸಂಹಿತೆ ಬಂದಿದೆ. ಹೀಗಾಗಿ ಮೀಸಲಾತಿ ನೆನೆಗುದಿಗೆ ಬಿದ್ದಿತ್ತು ಎಂದರು.
ಬಜೆಟ್ ಅಧಿವೇಶನ ಮುಗಿದು 2 ತಿಂಗಳಾದರೂ ಸಿಎಂ ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಿಪ್ಪಾಣಿಯಿಂದ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಹೋರಾಟ ಮಾಡಲು ಆರಂಭಿಸಿದೆ. ಇದೇ ರೀತಿ ಹಿರೇವಂಕಲಕುಂಟಿಯಲ್ಲಿ ಸೆ. 30 ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೋರಾಟ ಮಾಡಲಾಗುವುದು. ಕಳೆದ ಸರ್ಕಾರ ನಿಧಾನಗತಿ ನೀತಿ ಅನುಸರಿಸಿದೆ. ಈ ಸರ್ಕಾರವಾದರೂ ಬೇಗನೆ ಮೀಸಲಾತಿ ನೀಡಲಿ. 2024ರ ಚುನಾವಣೆಯ ಮುನ್ನ ಘೋಷಣೆ ಮಾಡಬೇಕು. ಯಡಿಯೂರಪ್ಪ ಸರ್ಕಾರವು ನಿಧಾನಗತಿ ನೀತಿ ಅನುಸರಿಸಿದರು ಎಂದು ಸ್ವಾಮೀಜಿ ಆರೋಪಿಸಿದರು.
ಹೋರಾಟದಲ್ಲಿ ಜನಪ್ರತಿನಿಧಿಗಳು ಭಾಗಿಯಾಗುತ್ತಿಲ್ಲ. ಆದರೆ ಈಗ ಅವರ ಕ್ಷೇತ್ರದ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ನಾನು ಕಡ್ಡಾಯವಾಗಿ ಭಾಗವಹಿಸಿ ಎಂದು ಹೇಳಿಲ್ಲ. ಅನುಕೂಲವಾದಲ್ಲಿ ಭಾಗಿಯಾಗಿ ಎಂದಿದ್ದೇನೆ. ಮೀಸಲಾತಿ ಸಿಗುವವರಿಗೂ ಹೋರಾಟ ನಡೆಸುತ್ತೇವೆ. ಈ ಸರ್ಕಾರದವರು ಪಂಚಮಸಾಲಿ ಕಡೆಗಣಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಲಿಂಗಾಯತ ಪಂಚಮಸಾಲಿ 2ಎ ಸೇರ್ಪಡೆಗೆ ಆಗ್ರಹ: ಮತ್ತೆ ಜಯಮೃತ್ಯುಂಜಯ ಶ್ರೀಗಳಿಂದ ಧರಣಿ ಸತ್ಯಾಗ್ರಹ..