ಕೊಪ್ಪಳ:ಜಿಲ್ಲಾ ಉಸ್ತುವಾರಿ ಖಾತೆಯನ್ನು ನೀಡಿದ್ದಕ್ಕೆ ನನಗೆ ಖುಷಿಯಾಗಿದೆ. ಈ ಹಿಂದೆಯೂ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೆ. ಈಗ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾಗಿರೋದರಿಂದ ಈ ಭಾಗದಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವೆ. ಮಂತ್ರಿಯಾದ ಮೇಲೆ ನಾವು ರಾಜ್ಯಕ್ಕೆ ಮಂತ್ರಿಗಳು. ತವರು ಜಿಲ್ಲೆಗೆ ಉಸ್ತುವಾರಿ ಸಚಿವ ಸ್ಥಾನ ಸಿಗದಿರುವುದು ಯಾರಿಗೂ ಅಸಮಾಧಾನವಿಲ್ಲ. ಮಂತ್ರಿಯಾದವರಿಗೆ ಕೆಲಸ ಮಾಡಲು ಯಾವ ಜಿಲ್ಲೆಯಾದರೇನು? ಎಲ್ಲರೂ ಕೂಡಿ ಕೆಲಸ ಮಾಡಬೇಕು. ನಾನು ಜೀವನದಲ್ಲಿ ಯಾವತ್ತೂ, ಸೋತಾಗಲೂ ಅಸಮಾಧಾನಗೊಂಡಿಲ್ಲ ಎಂದರು.
ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ಇನ್ನು ಬಿ. ಶ್ರೀರಾಮುಲು ಅವರಿಗೆ ಮುಂದೆ ಪ್ರಬಲ ಖಾತೆ ಹಾಗೂ ಡಿಸಿಎಂ ಸ್ಥಾನ ಸಿಗಬಹುದು ಎಂದು ಸವದಿ ವಿಶ್ವಾಸ ವ್ಯಕ್ತಪಡಿಸಿದರು. ನೆರೆ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ತಂಡ ಅಧ್ಯಯನ ನಡೆಸಿದೆ. ರಾಜ್ಯಕ್ಕೆ ಕೇಂದ್ರದಿಂದ ನ್ಯಾಯ ಸಮ್ಮತವಾದ ಪರಿಹಾರ ಸಿಗಲಿದೆ. ಹೊಸ ಮೋಟಾರು ವಾಹನ ಕಾಯ್ದೆಯ ದಂಡದ ಪ್ರಮಾಣದ ಕುರಿತು ಬೇರೆ ಬೇರೆ ರಾಜ್ಯಗಳಿಂದ ವರದಿ ತರಿಸಿಕೊಳ್ಳಲಾಗಿದೆ. ನಾಡಿದ್ದು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ವಿವೇಚನೆ ಇಲ್ಲದೆ ರಾಜ್ಯ ಸರ್ಕಾರವು ಹೈದರಾಬಾದ್ ಕರ್ನಾಟಕ ಭಾಗದ ಹೆಸರು ಬದಲಾವಣೆ ಮಾಡಿದೆ ಎಂಬ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಯರೆಡ್ಡಿಗೆ ವಿವೇಚನೆ ಇಲ್ಲ ಅನ್ಸುತ್ತೆ. ಕಲ್ಯಾಣ ಕರ್ನಾಟಕ ಎಂಬ ಹೆಸರು ಬದಲಾವಣೆಯಿಂದ ಈ ಭಾಗದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂದರು.