ಗಂಗಾವತಿ ಅಂಜನಾದ್ರಿ ದೇಗುಲದ ಹುಂಡಿ ಎಣಿಕೆ ಗಂಗಾವತಿ:ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಚಿಕ್ಕರಾಂಪೂರದ ಅಂಜನಾದ್ರಿ ದೇಗುಲದ ಹುಂಡಿಯಲ್ಲಿ 20.36 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ದೇಗುಲದ ಆಡಳಿತಾಧಿಕಾರಿ ಹಾಗೂ ಗಂಗಾವತಿ ತಹಶೀಲ್ದಾರ್ ವಿಶ್ವನಾಥ ಮುರಡಿ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು.
ನೇಪಾಳದ ಎರಡು ನೋಟು, ಇಂಗ್ಲೆಂಡಿನ ಯೂರೋ, ಜಪಾನ್ ಹಾಗೂ ದುಬೈನ ತಲಾ ಒಂದೊಂದು ನಾಣ್ಯ ಸೇರಿದಂತೆ ವಿವಿಧ ಮುಖಬೆಲೆಯ ಆರು ನಾಣ್ಯಗಳು ಹುಂಡಿಯಲ್ಲಿ ಸಿಕ್ಕಿವೆ. ನವೆಂಬರ್ 11ರಂದು ಹುಂಡಿ ಎಣಿಕೆ ಸಂದರ್ಭದಲ್ಲಿ 27.16 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ದೇಗುಲದ ಆದಾಯದಲ್ಲಿ 6.80 ಲಕ್ಷ ರೂಪಾಯಿ ಆದಾಯ ಕುಸಿತವಾಗಿದೆ.
ಡಿಸೆಂಬರ್ 24ರಂದು ಹನುಮ ಜಯಂತಿ ಅಂಗವಾಗಿ ರಾಜ್ಯದ ನಾನಾ ಜಿಲ್ಲೆಗಳಿಂದ ಹನುಮ ಮಾಲಾಧಾರಿಗಳು ಮಾಲಾ ವಿಸರ್ಜನೆಗೆ ಆಗಮಿಸಲಿದ್ದಾರೆ. ಇದರಿಂದ ಆದಾಯ ಹೆಚ್ಚುವ ಸಾಧ್ಯತೆ ಇದೆ. ಮಾಲಾ ವಿಸರ್ಜನೆಗಾಗಿ ಅಧಿಕಾರಿಗಳು ಪೂರ್ವಸಿದ್ಧತೆ ಮಾಡುತ್ತಿದ್ದಾರೆ.
ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಗೌಡ, ಶಿರಸ್ತೇದಾರ ರವಿಕುಮಾರ ನಾಯಕವಾಡಿ, ಮೆಹಬೂಬ್ ಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕ ಮಹೇಶ್ ದಲಾಲ, ಮಂಜುನಾಥ ಹಿರೇಮಠ್ ಹಾಲೇಶ್, ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಮಂಜುನಾಥ, ಸುಧಾ, ಶ್ರಿರಾಮ ಜೋಷಿ, ಹನುಮೇಶ ಪೂಜಾರ, ದೇಗುಲದ ವ್ಯವಸ್ಥಾಪಕ ವೆಂಕಟೇಶ ಎಣಿಕೆ ಕಾರ್ಯದ ಸಂದರ್ಭಲ್ಲಿ ಉಪಸ್ಥಿತರಿದ್ದರು.
ಇತ್ತೀಚಿನ ಹುಂಡಿ ಎಣಿಕೆ ವರದಿ:ಅಂಜನಾದ್ರಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಹುಂಡಿ ಎಣಿಕೆಯಲ್ಲಿ ಒಂದು ವಿದೇಶಿ ನೋಟು ಸೇರಿದಂತೆ ವಿದೇಶಗಳ ಒಟ್ಟು 8 ನಾಣ್ಯಗಳು ದೊರೆತಿದ್ದವು. ತಹಶೀಲ್ದಾರ್ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ಎಣಿಕೆ ನಡೆದಿತ್ತು. ಯುನೈಟೆಡ್ ಸ್ಟೇಟ್ ಅಮೆರಿಕದ (ಯುಎಸ್ಎ) ಒಂದು ಡಾಲರ್, ಯುಕೆ, ನೇಪಾಳ, ಮಲೇಶಿಯಾ, ಜಪಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ದಕ್ಷಿಣ ಕೋರಿಯಾ ಸೇರಿದಂತೆ ಏಳು ದೇಶಗಳ ಒಟ್ಟು ಎಂಟು ನಾಣ್ಯಗಳು ಸಿಕ್ಕಿದ್ದವು. ಒಟ್ಟು 27,16 ಲಕ್ಷ ಹಣ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿತ್ತು.
ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ದೀಪಿಕಾ ಪಡುಕೋಣೆ - ವಿಡಿಯೋ ನೋಡಿ