ಗಂಗಾವತಿ(ಕೊಪ್ಪಳ): ತಾಲೂಕಿನ ಪವಿತ್ರ ಧಾರ್ಮಿಕ ತಾಣ ಅಂಜನಾದ್ರಿ ಒಳಗೊಂಡಂತೆ ಇರುವ ಕಿಷ್ಕಿಂಧ ಪ್ರದೇಶವನ್ನು ಡ್ರಗ್ಸ್ ಮಾಫಿಯಾಕ್ಕೆ ಹೋಲಿಕೆ ಮಾಡಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಒಬ್ಬ ಮಾನಸಿಕ ರೋಗಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಹೆಚ್.ಆರ್ ಶ್ರೀನಾಥ್ ಟೀಕಿಸಿದ್ದಾರೆ.
ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯರೆಡ್ಡಿ ಹಿರಿಯ ರಾಜಕಾರಣಿ ಎಂದು ಭಾವಿಸಲಾಗಿತ್ತು. ಆದರೆ ಹನುಮನ ಜನ್ಮ ಸ್ಥಾನ ಕಿಷ್ಕಿಂಧೆಯ ಬಗ್ಗೆ ನೀಡಿರುವ ಹೇಳಿಕೆ ಗಮನಿಸಿದರೆ ಅವರು ಮಾನಸಿಕ ಆಸ್ಪತ್ರೆಯ ರೋಗಿಯಂತೆ ವರ್ತಿಸಿದ್ದಾರೆ. ಅಂಜನಾದ್ರಿ ಸುತ್ತಲಿನ ಪರಿಸರದ ಬಗ್ಗೆ ಪೂರ್ವಾಪರ ತಿಳಿಯದೇ ರಾಯರೆಡ್ಡಿ ನೀಡಿರುವ ಹೇಳಿಕೆ ಗಂಗಾವತಿ ಭಾಗದ ಜನರನ್ನು ಅವಮಾನ ಮಾಡಿದಂತಾಗಿದೆ. ಬಹುಶಃ ರಾಯರೆಡ್ಡಿ ಮಾನಸಿಕ ರೋಗದಿಂದ ಬಳಲುತ್ತಿರುವಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ:ವಿಶ್ವದರ್ಜೆಯ ತಾಣಕ್ಕಾಗಿ ಬಜೆಟ್ನಲ್ಲಿ ಅಂಜನಾದ್ರಿಗೆ ಮತ್ತೆ ನೂರು ಕೋಟಿ ಘೋಷಣೆ.. ಆ ಭಾಗದಲ್ಲಿ ಸಂತಸದ ಹೊನಲು!
ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಸ್ಪೀಕರ್ಗೆ ಪತ್ರ: ಸೂಕ್ಷ್ಮ ವಿಚಾರಗಳಲ್ಲಿ ತಲೆ ಹಾಕುವ ರಾಯರೆಡ್ಡಿ ಗಲಭೆ ಸೃಷ್ಟಿಸುವ ಉದ್ದೇಶಕ್ಕೆ ಅನಗತ್ಯ ಹೇಳಿಕೆ ನೀಡುತ್ತಾರೆ. ಈ ಹಿನ್ನೆಲೆ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಸ್ಪೀಕರ್ಗೆ ಪತ್ರ ಬರೆಯಲಾಗುವುದು. ಅಲ್ಲದೇ ಜನರ ಭಾವನೆಗಳನ್ನು ಕದಡುವ ಮೂಲಕ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸಕ್ಕೆ ಕೈ ಹಾಕಿರುವ ರಾಯರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಕೆಪಿಸಿಸಿಗೆ ಒತ್ತಾಯಿಸಲಾಗುವುದು ಎಂದರು.