ಗಂಗಾವತಿ:ಕೊರೊನಾ ಸೋಂಕಿಗೆ ಒಳಗಾಗಿದ್ದ ಮಹಿಳೆಯೊಬ್ಬರು ಮಾನಸಿಕ ಖಿನ್ನತೆಗೆ ಒಳಗಾಗಿ ತಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಆನೆಗೊಂದಿ ರಸ್ತೆಯಲ್ಲಿರುವ ಮಹಿಳೆ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಗದಗ ನಗರದ ಕರಿಯಮ್ಮನ ಕಲ್ಲು ಬಡಾವಣೆಯ ನಿವಾಸಿ ರೋಹಿಣಿ ಕಲ್ಮೇಶ್ವರಯ್ಯ ಕಲ್ಮಠ (48) ಎಂದು ಗುರುತಿಸಲಾಗಿದೆ. ಈ ಸಂಬಂಧ ಮೃತಳ ಪುತ್ರ ಚಂದ್ರಮೌಳೇಶ್ವರ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಗದಗ ನಗರದ ರೋಹಿಣಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಅವರು ಇಲ್ಲಿನ ಆಸ್ಪತ್ರೆಗೆ ಕಳೆದ ಮೇ.24 ರಂದು ದಾಖಲಾಗಿದ್ದರು. ಸೋಂಕಿನಿಂದ ಚೇತರಿಕೆ ಕಂಡ ಬಳಿಕ ಅವರು ಮೇ.28 ರಂದು ಡಿಸ್ಚಾರ್ಜ್ ಆಗಿದ್ದರು. ಆದರೆ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಜೂನ್ 2ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.
ಇವರೊಂದಿಗೆ ಮಗಳು ಕೃತ್ತಿಕಾ ಕೂಡ ಕೋವಿಡ್ ಪಾಸಿಟಿವ್‌ಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರೂ ಗುಣಮುಖರಾದ ಕಾರಣ ಜೂ.6ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ವೈದ್ಯಕೀಯ ಸಿಬ್ಬಂದಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸೋಂಕಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೋಹಿಣಿ ಆಸ್ಪತ್ರೆಯಲ್ಲಿಯೇ ಕಿಟಕಿಯ ಬಾಗಿಲಿಗೆ ಸೀರೆಯ ಸೆರಗಿನಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.