ಕೊಪ್ಪಳ :ಮಹಾಶಿವರಾತ್ರಿಗೆ ಕ್ಷಣಗಣನೆ ಆರಂಭವಾಗಿದೆ. ಶಿವರಾತ್ರಿ ಸಂದರ್ಭದಲ್ಲಿ ಬಹುತೇಕರು ಉಪವಾಸ, ಜಾಗರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಬಗೆಬಗೆಯ ಹಣ್ಣು ಹಂಪಲುಗಳನ್ನು ಸೇವಿಸುತ್ತಾರೆ.
ಹೀಗಾಗಿ, ಹಣ್ಣುಗಳಿಗೆ ಫುಲ್ ಡಿಮ್ಯಾಂಡ್ ಇರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ನಗರದಲ್ಲಿ ಹಣ್ಣು ಮೇಳ ಶುರುವಾಗಿದ್ದು, ಮೇಳದಲ್ಲಿ ಬಗೆಬಗೆಯ ಹಣ್ಣು ಹಂಪಲುಗಳು ಜನರನ್ನ ಆಕರ್ಷಿಸುತ್ತಿವೆ.
ತೋಟಗಾರಿಕೆ ಬೆಳೆಯನ್ನು ಬೆಳೆಯುವ ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆಯೂ ಸಹ ಒಂದು ಪ್ರಮುಖ ಜಿಲ್ಲೆಯಾಗಿದೆ. ಜಿಲ್ಲೆಯ ಸುಮಾರು 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಾದ ವಿವಿಧ ಬಗೆಯ ಹಣ್ಣುಗಳು, ಹೂಗಳು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಲ್ಲಿ ಪೇರಲ ಹಣ್ಣು ಆಯ್ಕೆ ಮಾಡಿದೆ.
ತೋಟಗಾರಿಕೆ ಇಲಾಖೆ ಪ್ರತಿ ವರ್ಷ ವಿವಿಧ ಸಂದರ್ಭದಲ್ಲಿ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸುತ್ತಾ ಬರುತ್ತಿದ್ದು, ಇದೇ ಮಾರ್ಚ್ 1ರಂದು ಮಹಾಶಿವರಾತ್ರಿ ಇರುವ ಹಿನ್ನೆಲೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಣ್ಣು ಮೇಳ ಆಯೋಜಿಸಿದೆ.
ಇದನ್ನೂ ಓದಿ : ಮೆರವಣಿಗೆಯಲ್ಲಿ ಸಖತ್ ಸ್ಟೆಪ್ ಹಾಕಿದ ಸಂಸದ ಸಂಗಣ್ಣ ಕರಡಿ.. ವಿಡಿಯೋ
ರೈತರ ತೋಟದಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ, ನಾಲ್ಕು ದಿನಗಳ ಕಾಲ ಈ ಮೇಳ ಆಯೋಜಿಸಿದೆ. ಮೇಳದಲ್ಲಿ ದ್ರಾಕ್ಷಿ, ದಾಳಿಂಬೆ, ಪೇರಲ, ಕಲ್ಲಂಗಡಿ, ಕರ್ಬೂಜ, ಅಂಜೂರ, ಬಾಳೆ, ಪಪ್ಪಾಯಿ, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದ್ದಾರೆ.
ಜಿಲ್ಲೆಯ ತೋಟಗಾರಿಕೆ ಬೆಳೆಗಾರರು ಬೆಳೆದ 2 ಟನ್ ದ್ರಾಕ್ಷಿ, 4 ಟನ್ ಪೇರಲ, 1 ಟನ್ ಪಪ್ಪಾಯಿ, 4 ಟನ್ ಕಲ್ಲಂಗಡಿ, 4 ಟನ್ ಕರ್ಬೂಜ, 2 ಟನ್ ದಾಳಿಂಬೆ, 500 ಕೆಜಿ ಜೇನು ಸೇರಿದಂತೆ ವಿವಿಧ ಹಣ್ಣುಗಳು ಹಾಗೂ ತೋಟಗಾರಿಕೆ ಬೆಳೆಗಳ ಇನ್ನಿತರೆ ಉತ್ಪನ್ನಗಳ ಪ್ರದರ್ಶನದೊಂದಿಗೆ ಸುಮಾರು 30 ಲಕ್ಷ ರೂಪಾಯಿ ವಹಿವಾಟು ನಡೆಯುವ ಸಾಧ್ಯತೆ ಇದೆ ಅಂತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ.