ಕೊಪ್ಪಳ:ಲಾಕ್ಡೌನ್ ಅವಧಿಯಲ್ಲಿ ಕೆಲಸವಿಲ್ಲದೆ ಜೀವನ ನಡೆಸುವುದು ದುಸ್ಥರ ಎಂದು ಕೈಕಟ್ಟಿ ಕೂರುವವರ ಮಧ್ಯೆ ಇಲ್ಲೋರ್ವ ರೈತ ತನ್ನ ಉಪಕಸುಬಿನಿಂದಲೇ ಜೀವನ ನಡೆಸುತ್ತಿದ್ದಾರೆ.
ಕೊರೊನಾ ಭೀತಿಯಿಂದಾದ ಲಾಕ್ಡೌನ್ ನಿಂದ ತೊಂದರೆಗೆ ಸಿಲುಕಿದ್ದ ಸಾಮಾನ್ಯ ಜನರ ಬದುಕು ಇನ್ನೂ ಸುಧಾರಣೆ ಕಂಡಿಲ್ಲ. ಇಂತಹ ಸಂದರ್ಭದಲ್ಲಿಯೂ ಬದುಕಿಗೆ ಕೆಲವೊಂದು ಸಣ್ಣಪುಟ್ಟ ಕೆಲಸಗಳು ಕೈಹಿಡಿಯುತ್ತವೆ ಅನ್ನೋದು ಅಷ್ಟೇ ಸತ್ಯ. ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತ ಏಳುಕೋಟೇಶ್ ಕೋಮಲಾಪುರ ಎಂಬುವರು ಕೈಗೊಂಡ ಉಪ ಕಸುಬು ಇದೀಗ ಅವರ ಬದುಕಿಗೆ ದಾರಿ ದೀಪವಾಗಿದೆ.
ಕಳೆದ ಹಲವಾರು ವರ್ಷಗಳಿಂದ ಏಳುಕೋಟೇಶ ಕೋಮಲಾಪುರ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಲಾಕ್ಡೌನ್ನಿಂದಾಗಿ ಕೃಷಿ ಕಾರ್ಯ ನಿಂತು ಹೋಗಿದ್ದರೂ ಸಹ ಅವರ ಉಪಕಸುಬಾದ ಜೇನು ಸಾಕಾಣಿಕೆ ನಿಂತಿರಲಿಲ್ಲ. ಮನೆಯಲ್ಲಿರುವ ಅಲ್ಪ ಖಾಲಿ ಜಾಗವನ್ನೇ ಅವರು ಆದಾಯದ ಆಧಾರವಾಗಿ ಮಾಡಿಕೊಂಡಿರುವುದು ವಿಶೇಷ.