ಕೊಪ್ಪಳ: ಕೊರೊನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮಾ. 28ರಂದು ನಡೆಯಲಿರುವ ಹೋಳಿ ಆಚರಣೆಗೆ ಜಿಲ್ಲಾಡಳಿತ ಕೆಲ ನಿರ್ಬಂಧಗಳನ್ನು ವಿಧಿಸಿದ್ದು, ಗುಂಪು ಗುಂಪಾಗಿ ಹೋಳಿ ಆಚರಣೆ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಕೊರೊನಾ 2ನೇ ಅಲೆ ಭೀತಿ: ಹೋಳಿ ಆಚರಣೆಗೆ ನಿರ್ಬಂಧ ವಿಧಿಸಿದ ಕೊಪ್ಪಳ ಜಿಲ್ಲಾಡಳಿತ - holi celebration
ಕೊರೊನಾ ಎರಡನೇ ಅಲೆ ಶುರುವಾಗುತ್ತಿರುವ ಆತಂಕ ಹಿನ್ನೆಲೆ ಹೋಳಿ ಆಚರಣೆ ಸಂದರ್ಭದಲ್ಲಿ 10ಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳದಲ್ಲಿ ಗುಂಪು ಗುಂಪಾಗಿ ಸೇರಿ ಬಣ್ಣ ಎರಚುವುದನ್ನು ನಿಷೇಧಿಸಿ ಕೊಪ್ಪಳ ಡಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಈ ಆದೇಶ ಮಾಡಿದ್ದು, ಹೋಳಿ ಆಚರಣೆ ಸಂದರ್ಭದಲ್ಲಿ 10ಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳದಲ್ಲಿ ಗುಂಪು ಗುಂಪಾಗಿ ಸೇರಿ ಬಣ್ಣ ಎರಚುವುದನ್ನು ನಿಷೇಧಿಸಿದ್ದಾರೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಸೋಂಕು ಹರಡುವ ಭೀತಿ ಇದೆ. ಹೀಗಾಗಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಾಂಕ್ರಾಮಿಕ ರೋಗ ಕಾಯ್ದೆ 1897 ಹಾಗೂ ಕೋವಿಡ್-19 ರೆಗ್ಯುಲೇಷನ್ಸ್ 2020 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ಕಲಂ 30, 34ರ ಪ್ರಕಾರ ಆದೇಶ ಮಾಡಲಾಗಿದೆ.
ಮಾರ್ಚ್ 28 ಮತ್ತು 29ರಂದು 10ಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದು, ಗುಂಪು ಗುಂಪಾಗಿ ಸೇರಿ ಬಣ್ಣ, ಬಣ್ಣದ ನೀರು ಎರಚುವುದು, ತುಂಗಭದ್ರಾ ನದಿ ಪಾತ್ರ ಹಾಗೂ ಕಾಲುವೆಗಳಲ್ಲಿ ಬಣ್ಣ ಎರಚಿ ಮಲಿನ ಮಾಡುವುದನ್ನು ನಿಷೇಧಿಸಲಾಗಿದೆ. ಹೋಳಿ ಹಬ್ಬದ ಪ್ರಯುಕ್ತ ಜನರು ಒಟ್ಟೊಟ್ಟಿಗೆ ಸೇರಿ ಮಡಿಕೆ ಒಡೆಯುವ ಆಚರಣೆ ನಿರ್ಬಂಧಿಸಲಾಗಿದೆ. ಸರಳವಾಗಿ ಹಬ್ಬ ಆಚರಿಸಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.