ಗಂಗಾವತಿ (ಕೊಪ್ಪಳ) :ಭಾರತವನ್ನು ಒಗ್ಗೂಡಿಸುವ ಉದ್ದೇಶಕ್ಕೆ ಪಾಪ ರಾಹುಲ್ ಬಾಬಾ ಭಾರತ ಜೋಡೋ ಯಾತ್ರೆ ಹಮ್ಮಿಕೊಂಡಿದ್ದರು. ವಾಸ್ತವದಲ್ಲಿ ಭಾರತ ತೋಡೋ (ಇಬ್ಬಾಗಿಸುವ) ಯಾತ್ರೆ ಆರಂಭಿಸಿದ್ದೇ ರಾಹುಲ್ ಬಾಬಾ ಅವರ ತಾತ ನೆಹರೂ ಎಂದು ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಶರ್ಮ ಹೇಳಿದರು. ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಸೋಮವಾರ ನಡೆದ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಹಿಮಂತ ಬಿಸ್ವಾಸ್ ಶರ್ಮ, ದೇಶದ ಜನರಿಂದ ಈಗಾಗಲೇ ತಿರಸ್ಕಾರಕ್ಕೆ ಒಳಗಾಗಿರುವ ಕಾಂಗ್ರೆಸ್ ನಿಧಾನವಾಗಿ ಅವನತಿಯ ಹಾದಿ ಹಿಡಿದಿದೆ ಎಂದರು.
ಭಾರತವನ್ನು ಒಗ್ಗೂಡಿಸುತ್ತೇನೆ ಎಂದು ರಾಹುಲ್ ಬಾಬಾ ಹೊರಟಿದ್ದಾರೆ. ಹಾಗಾದರೆ ಭಾರತವನ್ನು 1947ರಲ್ಲಿ ಇಬ್ಭಾಗ ಮಾಡಿದ್ದು ಯಾರು? ಎಂಬ ಪ್ರಶ್ನೆಯನ್ನು ಟ್ವೀಟ್ ಮೂಲಕ ರಾಹುಲ್ ಗಾಂಧಿಗೆ ನಾನು ಕೇಳಿದ್ದೆ. ಅದಕ್ಕೆ ಅವರು ಉತ್ತರವೇ ನೀಡಲಿಲ್ಲ ಎಂದರು.
ನಿಮ್ಮ ಆಡಳಿತದಲ್ಲಿ ಜಮ್ಮು-ಕಾಶ್ಮೀರವನ್ನು ಹೇಗೆ ಇಟ್ಟಿದ್ದೀರಿ? ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಈಗ ಹೇಗಿಟ್ಟಿದ್ದಾರೆ ಎಂಬುವುದು ಜನರಿಗೆ ಗೊತ್ತಾಗುತ್ತಿದೆ. ರಾಹುಲ್ ಬಾಬಾ ಈಗ ಭಾರತ್ ಜೋಡೋ ಕೈಗೊಂಡು ಏನು ಪ್ರಯೋಜನ ಎಂದು ಬಿಸ್ವಾಸ್ ಪ್ರಶ್ನಿಸಿದರು.
ದೇಶದ ಮೂಲೆ ಮೂಲೆಯಲ್ಲೂ ಕಣ್ಮರೆಯಾದ ಕಾಂಗ್ರೆಸ್ :ಭಾರತವನ್ನು ಶಕ್ತಿಶಾಲಿಯನ್ನಾಗಿಸುವ ಸುದೀರ್ಘ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದ್ದರೂ ಅದನ್ನು ವ್ಯರ್ಥ ಮಾಡಿದೆ. ಜನರ ಭಾವನೆಗಳೊಂದಿಗೆ ಆಟವಾಡಿದ ಕಾಂಗ್ರೆಸ್ ಈಗಾಗಲೇ ದೇಶದ ಎಲ್ಲ ಮೂಲೆಯಲ್ಲೂ ಕಣ್ಮರೆಯಾಗಿದೆ. ಅಸ್ಸೋಂನಂತಗ ರಾಜ್ಯದಲ್ಲಿ ಒಂದೇ ಒಂದು ಸ್ಥಾನ ಕಾಂಗ್ರೆಸ್ಗೆ ಬಿಟ್ಟುಕೊಟ್ಟಿಲ್ಲ ಎಂದರು. ಇದೀಗ ಮೋದಿ ನೇತೃತ್ವದಲ್ಲಿನ ಸರ್ಕಾರ ಸದೃಢವಾಗಿದೆ. ಅಭಿವೃದ್ಧಿ, ಆಂತರಿಕ ಶಕ್ತಿಯಲ್ಲಿ ವಿಶ್ವದ ಬಲಾಢ್ಯ ದೇಶಗಳ ಸಾಲಿನಲ್ಲಿ ನಿಲ್ಲುತ್ತಿದೆ. ಇಂದು ಭಾರತ ವಿಶ್ವಮಾನ್ಯವಾಗಿದ್ದು, ವಿದೇಶದಲ್ಲಿ ಭಾರತದ ಅಭಿವೃದ್ಧಿ, ನಾಯಕತ್ವದ ಚರ್ಚೆಯಾಗುತ್ತಿದೆ ಎಂದು ಬಿಸ್ವಾಸ್ ಹೇಳಿದರು.