ಕೊಪ್ಪಳ: ವರ ಮಹಾಲಕ್ಷ್ಮಿ ಅಲಂಕಾರ ಪ್ರಿಯಳು. ವಿವಿಧ ರೀತಿಯಲ್ಲಿ ಅಲಂಕಾರ ಮಾಡಿದರೆ ಪ್ರಸನ್ನಳಾಗುತ್ತಾಳೆ ಎಂಬುದು ನಂಬಿಕೆ. ಹೀಗಾಗಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಉಳ್ಳವರು ಬಗೆ ಬಗೆಯ ಚಿನ್ನದ ಆಭರಣಗಳನ್ನು ಹಾಕಿ ಅಲಂಕರಿಸಿ ವರಮಹಾಲಕ್ಷ್ಮಿಗೆ ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯ ಹಾಗೂ ಮಧ್ಯಮ ವರ್ಗದ ಕುಟುಂಬದವರು ಹಬ್ಬದ ಸಂದರ್ಭದಲ್ಲಿ ಗುಂಜಿ ಬಂಗಾರವನ್ನಾದರೂ ಖರೀದಿಸುತ್ತಿದ್ದರು. ಆದರೆ, ಈ ವರ್ಷ ಚಿನ್ನದ ಬೆಲೆ ಗಗನಕ್ಕೇರಿದೆ.
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರಿಕೆಯಾಗುತ್ತಿರೋದು ಆಭರಣ ಪ್ರಿಯರಲ್ಲಿ ನಿರಾಸೆ ಮೂಡಿಸುತ್ತಿದೆ. ಅದರಲ್ಲೂ ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬದವರ ಕೈಗೆ ಬಂಗಾರ ಈಗ ಎಟುಕದ ಬೆಲೆಯಲ್ಲಿದೆ. ಜುಲೈ 30ರ ಸಂಜೆಯ ವೇಳೆಗೆ ಕೊಪ್ಪಳದಲ್ಲಿ 10 ಗ್ರಾಂ ಶುದ್ಧ ಚಿನ್ನಕ್ಕೆ 55,300 ರುಪಾಯಿ ಇತ್ತು. 10 ಗ್ರಾಂ ಶುದ್ಧ ಚಿನ್ನದ ಬೆಲೆ 55 ಸಾವಿರ ರೂ. ಗಡಿ ದಾಟಿರುವುದರಿಂದ ಸಾಮಾನ್ಯ ಜನರಿಗೆ ಈಗ ಚಿನ್ನ ಅನ್ನೋದು ಗಗನ ಕುಸುಮವಾಗಿ ಪರಿಣಮಿಸಿದೆ.