ಗಂಗಾವತಿ (ಕೊಪ್ಪಳ) : ಮಾಧ್ವ ಪರಂಪರೆಯ ಪ್ರಮುಖ ಧಾರ್ಮಿಕ ಕೇಂದ್ರವಾದ ತಾಲ್ಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ಮೂರು ದಿನಗಳ ಕಾಲ ರಘುವರ್ಯತೀರ್ಥರ ಆರಾಧನೆಗೆ ಉತ್ತರಾಧಿಮಠಕ್ಕೆ ಅವಕಾಶ ನೀಡಿ ಹೈಕೋರ್ಟ್ ಆದೇಶ ನೀಡಿದೆ. ಜೂ.5ರಿಂದ 7ರವರೆಗೆ ನಡೆಯುವ ರಘುವರ್ಯ ತೀರ್ಥರ ಆರಾಧನೆಗೆ ಉತ್ತರಾಧಿಮಠಕ್ಕೆ ಅವಕಾಶ ಕಲ್ಪಿಸಿ ಧಾರವಾಡದ ಹೈಕೋರ್ಟ್ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ಬಳಿಕ ನವವೃಂದಾವನಕ್ಕೆ ಪ್ರವೇಶಿಸಿದ ಉತ್ತರಾಧಿಮಠದ ಪೀಠಾಧಿಪತಿ ಸತ್ಯಾತ್ಮತೀರ್ಥರು, ರಘುವರ್ಯ ತೀರ್ಥರ ವೃಂದಾವನಕ್ಕೆ ಪೂಜೆ ಸಲ್ಲಿಸುವ ಮೂಲಕ ಪೂರ್ವಾರಾಧನೆ ನೆರವೇರಿಸಿದರು. ಮಂಗಳವಾರ ಮತ್ತು ಬುಧವಾರ ಮಧ್ಯಾರಾಧನೆ ಮತ್ತು ಉತ್ತರಾಧನೆ ನೆರವೇರಲಿದೆ.
ಜೂನ್ 5ರಿಂದ ಮೂರು ದಿನಗಳ ಕಾಲ ನವವೃಂದಾವನ ಗಡ್ಡೆಯಲ್ಲಿ ರಘುವರ್ಯ ತೀರ್ಥರ ಆರಾಧನೆ ಅಂಗವಾಗಿ ಉತ್ತರಾಧಿಮಠದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ಮಠದ ಅನುಯಾಯಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಇದೇ ಸಮಯದಲ್ಲಿ ಮೂರು ದಿನಗಳ ಕಾಲ ಮಂತ್ರಾಲಯ ಮಠದಿಂದ ಶ್ರೀ ಮನ್ನಯಾಸುಧಾ ಸಮರ್ಪಣಾ ದಿನೋತ್ಸವದ ಆಚರಣೆಗೆ ಅವಕಾಶ ನೀಡುವಂತೆ ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಅನುಯಾಯಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.