ಕೊಪ್ಪಳ:ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ತಡರಾತ್ರಿ ಧಾರಾಕಾರ ಮಳೆ ಸುರಿದಿದೆ. ಮಧ್ಯರಾತ್ರಿ ಸುಮಾರು 2 ಗಂಟೆಗೆ ಆರಂಭವಾದ ಮಳೆ ಬೆಳಗಿನವರೆಗೂ ಸುರಿದಿದೆ.
ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆ...ನೆಲ ಕಚ್ಚಿದ ಭತ್ತದ ಬೆಳೆ ರಾತ್ರಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಕೊಪ್ಪಳ ತಾಲೂಕಿನ ಶಹಪೂರ,ಲಿಂಗದಳ್ಳಿ ಹಾಗೂ ಬೇವಿನಹಳ್ಳಿ ಗ್ರಾಮಗಳಲ್ಲಿ ಭತ್ತದ ಬೆಳೆ ನೆಲಕಚ್ಚಿದೆ. ಸಾಲ ಸೂಲ ಮಾಡಿ ಬೆಳೆದಿದ್ದ ಬೆಳೆ, ಮಳೆಗೆ ನೆಲಕಚ್ಚಿರೋದನ್ನ ನೋಡಿ ರೈತರು ಕಂಗಾಲಾಗಿದ್ದಾರೆ.
ತಾಲೂಕಿನ ಮುದ್ಲಾಪುರ ಬಳಿ ಇರುವ ಹಿರೇಹಳ್ಳ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಗೆ ಜಲಾಶಯಕ್ಕೆ ವ್ಯಾಪಕ ನೀರು ಹರಿದುಬಂದಿದೆ. ಇದರಿಂದಾಗಿ ಹಿರೇಹಳ್ಳ ಜಲಾಶಯದಿಂದ ಮೂರು ಕ್ರಸ್ಟ್ ಗೇಟ್ಗಳ ಮೂಲಕ ಹಿರೇಹಳ್ಳಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ.
ಸುಮಾರು ವರ್ಷಗಳಿಂದ ನೀರಿಲ್ಲದೇ ಬಣಗುಡುತ್ತಿದ್ದ ಹಿರೇಹಳ್ಳ ಈಗ, ನಯನ ಮನೋಹರವಾಗಿ ಹರಿಯುತ್ತಿದೆ. ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಿರೇಹಳ್ಳ ಪುನಶ್ಚೇತನಗೊಳಿಸಿದ ಮೇಲೆ ಈಗ ಮೂರನೇ ಬಾರಿ ಹಿರೇಹಳ್ಳದಲ್ಲಿ ನೀರು ಹರಿಯುತ್ತಿದೆ. ಕಳೆದ ಎರಡು ಬಾರಿಗಿಂತ ಈ ಬಾರಿ ಹಿರೇಹಳ್ಳದಲ್ಲಿ ಅತಿಹೆಚ್ಚು ನೀರು ಹರಿಯುತ್ತಿದೆ.