ಕೊಪ್ಪಳ:ಜಿಲ್ಲೆಯಲ್ಲಿ ರಾತ್ರಿ ಹಾಗೂ ಬೆಳಗ್ಗೆ ಸುರಿದ ಭಾರಿ ಮಳೆಯಿಂದ ಅನೇಕ ಕಡೆ ಅವಾಂತರ ಸೃಷ್ಠಿಯಾಗಿದೆ. ಮಳೆಯಿಂದಾಗಿ ಅನೇಕ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಕನಕಗಿರಿ ತಾಲೂಕಿನ ಸೋಮಸಾಗರ ಬಳಿ ಹಳ್ಳ ಭೋರ್ಗರೆಯುತ್ತಿದ್ದು ಕನಕಗಿರಿ - ಸೋಮಸಾಗರ ನಡುವಿನ ಸಂಪರ್ಕ ಕಡಿತಗೊಂಡಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ಅವಾಂತರ: ಹಲವೆಡೆ ಪ್ರವಾಹ ಸ್ಥಿತಿ, ಜನಜೀವನ ಅಸ್ತವ್ಯಸ್ತ - ಕುಷ್ಟಗಿ ತಾಲೂಕಿನ ನಿಡಶೇಸಿ
ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹದಿಂದ ಜನ ಇನ್ನು ಚೇತರಿಸಿಕೊಂಡಿಲ್ಲ. ಅಷ್ಟರಲ್ಲಾಗಲೇ ಮಳೆರಾಯ ಮತ್ತೆ ಅವಾಂತರ ಸೃಷ್ಟಿ ಮಾಡಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇದು ಪ್ರವಾಹ ಪೀಡಿತ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ತುಂಬಿ ಹರಿಯುತ್ತಿರುವ ಹಳ್ಳವನ್ನು ನೂರಾರು ಜನರು ತಂಡೋಪತಂಡವಾಗಿ ಬಂದು ನೋಡುವಂತಹ ದೃಶ್ಯಾವಳಿಗಳು ಕಂಡುಬಂತು. ಪ್ರವಾಹ ಸ್ಥಿತಿ ಹಿನ್ನೆಲೆ ಜೆಸಿಬಿ ಮೂಲಕ ಜನರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ತಲುಪಿಸಲಾಯಿತು. ಇನ್ನು ಕುಷ್ಟಗಿ ತಾಲೂಕಿನಲ್ಲಿಯೂ ಮಳೆರಾಯ ಅಬ್ಬರಿಸಿದ್ದು ಜನ ಜೀವನಕ್ಕೆ ಅಡಚಣೆಯಾಗಿದೆ.
ಮಳೆಯಿಂದ ಅವಾಂತರ ಸೃಷ್ಠಿಯಾದ ಸ್ಥಳಕ್ಕೆ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಷ್ಟಗಿ ತಾಲೂಕಿನ ನಿಡಶೇಸಿ, ಯಲಬುರ್ತಿ ಗ್ರಾಮಗಳಲ್ಲಿ ನೀರು ನುಗ್ಗಿದೆ. ನೀರು ನುಗ್ಗಿದ ಈ ಗ್ರಾಮಳಿಗೆ ಶಾಸಕ ಅಮರೇಗೌಡ ಭಯ್ಯಾಪೂರ ಭೇಟಿ ನೀಡಿ ನೀರಿನಲ್ಲಿಳಿದು ಗ್ರಾಮಸ್ಥರ ಅಹವಾಲು ಕೇಳಿದರು. ಇನ್ನು ಕುಷ್ಟಗಿ ತಾಲೂಕಿನ ಮುದೇನೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆಯಿಂದ ಈರುಳ್ಳಿ, ತೊಗರಿ ಹಾಗೂ ಇನ್ನಿತರೆ ಬೆಳೆಗಳು ಜಲಾವೃತಗೊಂಡಿವೆ.