ಕುಷ್ಟಗಿ (ಕೊಪ್ಪಳ): ತಡರಾತ್ರಿ ಸುರಿದ ಕೃತಿಕಾ ಮಳೆ ರೈತಾಪಿ ವರ್ಗಕ್ಕೆ ಕೊರೊನಾ ಸಂಕಷ್ಟದಲ್ಲೂ ಸಂತಸ ತರಿಸಿದೆ.
ಲಾಕಡೌನ್ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಲ್ಲಿ ಆರಂಭಿಸಿದ್ದ ಕೃಷಿ ಇಲಾಖೆಯ ಜಲಾಮೃತ ಯೋಜನೆಯಲ್ಲಿ ಕೃಷಿ ಬದು, ಕಂದಕ ಬದು ನಿರ್ಮಿಸಿದ್ದರಿಂದ ಎಲ್ಲವೂ ಮಳೆ ನೀರಿನಿಂದ ಭರ್ತಿಯಾಗಿದ್ದು, ಇದರಿಂದ ಜಮೀನಿನ ತೇವಾಂಶ ಹಿಡಿದಿಟ್ಟುಕೊಳ್ಳಲು ಪೂರಕವಾಗಿದೆ.
ಕುಷ್ಟಗಿಯಲ್ಲಿ ಸುರಿದ ಮಳೆಯಿಂದ ಕೃಷಿ ಹೊಂಡಗಳು ಭರ್ತಿ ಬಹುತೇಕ ಕೃಷಿ ಹೊಂಡಗಳು ಭರ್ತಿಯಾಗಿದ್ದು, ಒಡ್ಡು ಪ್ರದೇಶದಲ್ಲಿ ನೀರು ತುಂಬಿರುವುದು ಕಂಡು ಬಂದಿದೆ. ಪ್ರಸಕ್ತ ಸಾಲಿನ ಮುಂಗಾರ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರೀಕ್ಷಿಸಿದಂತೆ ಮಳೆಯಾಗಿದೆ. ಮುಂದುವರಿದ ಭಾಗವಾಗಿ ಕೃತಿಕಾ ಮಳೆ ಹದಭರಿತವಾಗಿದ್ದು, ಹೆಸರು ಬಿತ್ತನೆ ಕ್ಷೇತ್ರ ಇನ್ನಷ್ಟು ವಿಸ್ತಾರಗೊಳ್ಳುವ ಸಾಧ್ಯತೆಗಳಿವೆ.
ಕುಷ್ಟಗಿಯಲ್ಲಿ 45.6 ಮಿ.ಮೀ.ನಷ್ಟು ಮಳೆಯಾಗಿದೆ. ಕಿಲ್ಲಾರ ಹಟ್ಟಿಯಲ್ಲಿ 30.6 ಮಿ.ಮೀ., ತಾವರಗೇರಾದಲ್ಲಿ 22.2 ಮಿ.ಮೀ., ದೋಟಿಹಾಳದಲ್ಲಿ 21.3 ಮಿ.ಮೀ., ಉಳಿದಂತೆ ಹನುಮಸಾಗರದಲ್ಲಿ 5.2 ಮಿ.ಮೀ., ಹನುಮನಾಳದಲ್ಲಿ 2,2 ಮಿ.ಮೀ.ನಷ್ಟು ಮಳೆಯಾಗಿದೆ.
ಇನ್ನು ತಾಲೂಕಿನಲ್ಲಿ ಸಕಾಲಿಕವಾಗಿ ಉತ್ತಮ ಮಳೆಯಾಗಿದ್ದು, ಬಿತ್ತನೆಗೆ ಭೂಮಿ ಹದಗೊಳಿಸುವ ಕಾರ್ಯ ಕೈಗೊಳ್ಳಲು ಸೂಕ್ತವಾಗಿದೆ. ಬಿತ್ತನೆ ಬೀಜದ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್ ತಿಳಿಸಿದ್ದಾರೆ.