ಕುಷ್ಟಗಿ (ಕೊಪ್ಪಳ): ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಮಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮನವೊಲಿಸಿ ಲಸಿಕೆ ನೀಡಿದ್ದಾರೆ. ಹಾವಾಡಿಗರು, ಸುಡುಗಾಡು ಸಿದ್ದರು, ಚನ್ನದಾಸರು, ವಾಸವಾಗಿರುವ ಅಲೆಮಾರಿ ಬುಡಕಟ್ಟು ಸಮಾಜ ವಾಸವಿದ್ದ ಸಂತ ಶಿಶುನಾಳ ಷರೀಫ್ ನಗರಕ್ಕೆ ಭೇಟಿ ನೀಡಿದ ಬೆಂಗಳೂರು ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಪ ನಿರ್ದೇಶಕಿ ಬಿ.ವಾಣಿ ಜನರಲ್ಲಿ ಜಾಗೃತಿ ಮೂಡಿಸಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಇಲ್ಲಿನ ಜನ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ವಾಟ್ಸಾಪ್ನಲ್ಲಿ ಕೆಲವರು ವದಂತಿ ಹರಡಿದ್ದರಿಂದ ಯಾರು ಸಹ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಇಂತವರ ಮನವೊಲಿಸಿ ಲಸಿಕೆ ಹಾಕಿಸಬೇಕು ಎಂದಿದ್ದಾರೆ.
ಬಳಿಕ ಮಾತನಾಡಿರುವ ತಾಲೂಕು ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ, ಮೊದಲನೆ ಅಲೆ ಹಾಗೂ 2ನೇ ಅಲೆಯಲ್ಲಿ ಶೇ.100ರಷ್ಟು ಲಸಿಕಾಕರಣ ಸಾಧ್ಯವಾಗಿಲ್ಲ. ಇದೀಗ 3ನೇ ಅಲೆ ಮಕ್ಕಳಿಗೆ, ಹಿರಿಯರಿಗೆ ಬರುವ ಸಂಭವವಿದ್ದು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕಿದೆ. ವದಂತಿಗಳಿಗೆ ಕಿವಿಗೊಡದೇ ಲಸಿಕೆ ಹಾಕಿಸಬೇಕು ಎಂದು ಹೇಳಿದರು.