ಕುಷ್ಟಗಿ(ಕೊಪ್ಪಳ):ತಾಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ ಮದುವೆ ಬಳಿಕ ಆಸ್ತಿ ಹಂಚಿಕೆ ಎಂದಿದ್ದಕ್ಕೆ ತಮ್ಮ, ಒಡ ಹುಟ್ಟಿದ ಅಣ್ಣನನ್ನು ಕೊಲೆ ಮಾಡಿದ ಘಟನೆ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಯಮನೂರಪ್ಪ ಬಸಪ್ಪ ಕಡಿವಾಲರ್ (35) ಮೃತ ದುರ್ದೈವಿ ಅಣ್ಣ. ಯಮನೂರಪ್ಪನಿಗೆ ಕೆಲಸದ ನೆಪದಲ್ಲಿ ಬಂದ ಯಮರೂಪಿ ತಮ್ಮ ಮಲ್ಲಪ್ಪ ಕಡಿವಾಲರ್ (30) ನೊಂದಿಗೆ ಏಕಾಏಕಿ ಜಗಳಕ್ಕೆ ಇಳಿದಿದ್ದಾನೆ. ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ನಡೆಸಿ, ಸ್ನಾನದ ಕೊಠಡಿಯಲ್ಲಿ ಕಟ್ಟಿಗೆಯಿಂದ ಭೀಕರವಾಗಿ ಹೊಡೆದು ಕೆಳಗೆ ಕೆಡವಿ ಚಾಕುವಿನಿಂದ ಭೀಭತ್ಸವಾಗಿ ಮನಬಂದಂತೆ ಇರಿದು ಕೊಂದು ಹಾಕಿದ್ದಾನೆ. ನಂತರ ಕೊಲೆ ನಡೆದ ಸ್ಥಳದಲ್ಲಿ ಕದಲದೇ ಕುಳಿತು ಪೊಲೀಸರಿಗೆ ಶರಣಾಗಿದ್ದಾನೆ.
ಪಟ್ಟಣಚಿಂತಿ ಗ್ರಾಮದ ಬಸಪ್ಪ ಕಡಿವಾಲರ್ ಅವರಿಗೆ ನಾಲ್ವರು ಗಂಡು ಮಕ್ಕಳಿದ್ದು, 16 ಎಕರೆ ಜಮೀನು ಇತ್ತು. ಶರಣಪ್ಪ, ನಾಗಪ್ಪ, ಯಮನೂರಪ್ಪ, ಮಲ್ಲಪ್ಪ ಈ ನಾಲ್ವರು ಸಹೋದರರಲ್ಲಿ ಕೊಲೆ ಆರೋಪಿ ಮಲ್ಲಪ್ಪ ಕೊನೆಯವನಾಗಿದ್ದಾನೆ. ಈತನನ್ನು ಹೊರತು ಪಡಿಸಿ ಮೂವರು ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆರೋಪಿ ಮಲ್ಲಪ್ಪ ಮಾತ್ರ ಎರಡನೇ ಸಹೋದರ ನಾಗಪ್ಪನ ಜೊತೆಯಲ್ಲಿದ್ದ. ಇವರ ಪಿತ್ರಾರ್ಜಿತ 16 ಎಕರೆ ಆಸ್ತಿಯಲ್ಲಿ ತನಗೆ ಸೇರಬೇಕಾದ ಆಸ್ತಿ ಹಂಚಿಕೆಗೆ ಅಣ್ಣ ಯಮನೂರಪ್ಪ ಅವರನ್ನು ಒತ್ತಾಯಿಸುತ್ತಲೇ ಇದ್ದ ಎನ್ನಲಾಗಿದೆ.