ಕುಷ್ಟಗಿ(ಕೊಪ್ಪಳ):ತಾವರಗೇರಾ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹಥ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೊಂಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀ ಬಸವೇಶ್ವರ ವೃತ್ತದಿಂದ ನೂರಾರು ಜನರು ಮೇಣದ ಬತ್ತಿ ಹಿಡಿದುಕೊಂಡು ಮೆರವಣಿಗೆ ನಡೆಸಿದರು. ಮೆರವಣಿಗೆಯು ಮಹರ್ಷಿ ವಾಲ್ಮೀಕಿ ವೃತ್ತದ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ಬಂದು ತಲುಪಿತು. ನಂತರ ಉತ್ತರ ಪ್ರದೇಶದ ಕಾಮುಕರಿಂದ ಅತ್ಯಾಚಾರಕ್ಕೆ ಒಳಗಾಗಿ ಮೃತಳಾದ ಸಂತ್ರಸ್ತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೊಂಬತ್ತಿ ಹಿಡಿದು ಶ್ರದ್ಧಾಂಜಲಿ ಸಲ್ಲಿಸಿದರು.
ಮೊಂಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಮೆರವಣಿಗೆಯುದ್ದಕ್ಕೂ ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿ, ಕಾಮುಕರಿಗೆ ಗಲ್ಲು ಶಿಕ್ಷೆ ನೀಡಬೇಕು. ದಲಿತ ವಿರೋಧಿಗಳಿಗೆ ಶಿಕ್ಷೆಯಾಗಲೇಬೇಕು ಎಂದು ಘೋಷಣೆ ಹಾಕುತ್ತಾ ನಡೆದರು. ನಂತರ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ದಲಿತ ಮುಖಂಡ ಆನಂದ ಭಂಡಾರಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜಾನಾಯಕ, ವಾಲ್ಮೀಕಿ ಸಮುದಾಯದ ಮುಖಂಡ ಶರಣಪ್ಪ ಅಂಚಿ, ವಾಲ್ಮೀಕಿ ನಾಯಕ ಸಮಾಜದ ಹೋಬಳಿ ಅಧ್ಯಕ್ಷ ವೆಂಕಟೇಶ ಗೋತಗಿ ಮಾತನಾಡಿದರು.
ಮೆರವಣಿಗೆಯಲ್ಲಿ ವಾಲ್ಮೀಕಿ ನಾಯಕ, ಸಮುದಾಯದ ತಾಲೂಕು ಉಪಾಧ್ಯಕ್ಷ ಹನುಮೇಶ ನಾಯಕ, ಮುಖಂಡರಾದ ನರಹರಿ ಬಿಳೇಗುಡ್ಡ, ರಾಘವೇಂದ್ರ ನಾಯಕ, ಅಮರೇಶ ಚಲುವಾದಿ, ಸುರೇಶ, ವಿಜಯ, ನಬಿಸಾಬ ಸೇರಿದಂತೆ ವಿವಿಧ ಸಮುದಾಯದ ಮತ್ತು ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.