ಕೊಪ್ಪಳ:ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ 'ಹರ್ ಘರ್ ತಿರಂಗ' ಅಭಿಯಾನ ಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಈ ಹಿನ್ನೆಲೆ ಕೊಪ್ಪಳ ಜಿಲ್ಲೆಯಲ್ಲಿ ಸ್ವ- ಸಹಾಯ ಗುಂಪಿನ ಮಹಿಳೆಯರು ರಾಷ್ಟ್ರ ಧ್ವಜಗಳ ತಯಾರಿಯಲ್ಲಿ ತೊಡಗಿಸಿಕೊಂಡು ನಮ್ಮದೂ ಇದೊಂದು ದೇಶ ಸೇವೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದಾರೆ. ಜಿಲ್ಲೆಯ ಸುಮಾರು 150ಕ್ಕೂ ಹೆಚ್ಚು ಸ್ವ-ಸಹಾಯ ಮಹಿಳಾ ಗುಂಪಿನ ಸದಸ್ಯರು ರಾಷ್ಟ್ರ ಧ್ವಜಗಳನ್ನು ಸಿದ್ದಪಡಿಸುವಲ್ಲಿ ನಿರತರಾಗಿದ್ದಾರೆ.
ಸ್ವ-ಸಹಾಯ ಗುಂಪುಗಳಿಗೆ ಸಂಜೀವಿನಿ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗಿದೆ. ಲಭ್ಯವಾಗಿರುವ ಸಾಲದ ಹಣದಲ್ಲಿ ಧ್ವಜಕ್ಕೆ ಬೇಕಾದ ಬಟ್ಟೆಗಳನ್ನು ಖರೀದಿಸಿದ್ದಾರೆ. ಟೈಲರಿಂಗ್ ಕೆಲಸ ಮಾಡುವ ಗುಂಪಿನ ಸದಸ್ಯೆಯರಿಗೆ ಧ್ವಜಗಳನ್ನು ತಯಾರಿಸಲು ಸೂಚಿಸಲಾಗಿದೆ. ಗುಂಪಿನ ಸದಸ್ಯರು ತಮ್ಮ ಸಂಸ್ಥೆಯ ಕಚೇರಿಗಳಲ್ಲೆ ಧ್ವಜ ತಯಾರಿ ಕಾರ್ಯ ಕೈಗೊಂಡಿದ್ದಾರೆ.
1 ಲಕ್ಷ ಧ್ವಜ ತಯಾರು ಮಾಡುವ ಗುರಿ:ಜಿಲ್ಲೆಯಲ್ಲಿ ಸ್ವ-ಸಹಾಯ ಗುಂಪಿನ 150 ಕ್ಕೂ ಹೆಚ್ಚಿನ ಮಹಿಳೆಯರು ಕಳೆದ ಎರಡ್ಮೂರು ದಿನಗಳಿಂದ ಧ್ವಜಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಧ್ವಜಗಳು ಹಾರಲು ಸಿದ್ಧಗೊಂಡಿವೆ. ಒಂದು ಲಕ್ಷ ಧ್ವಜಗಳನ್ನು ತಯಾರು ಮಾಡುವ ಗುರಿ ಹೊಂದಲಾಗಿದ್ದು, ಇನ್ನು ನಾಲ್ಕು ದಿನದಲ್ಲಿ ಧ್ವಜಗಳು ತಯಾರಾಗಲಿವೆ. ಹೀಗೆ ಮಹಿಳಾ ಗುಂಪಿನ ಸದಸ್ಯರು ತುಯಾರಿಸಿದ ಧ್ವಜಗಳನ್ನು ಗ್ರಾಮ ಪಂಚಾಯಿತಿಯವರು ಹಣ ನೀಡಿ ಖರೀದಿಸುವಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.