ಗಂಗಾವತಿ(ಕೊಪ್ಪಳ):ಹನುಮ ಜಯಂತಿಯ ಭಾಗವಾಗಿ ಧರಿಸಿದ್ದ ಹನುಮ ಮಾಲೆ ವಿರಮಣ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿಯಲ್ಲಿ ಗುರುವಾರ ಸುಮಾರು ಒಂದು ಲಕ್ಷ ಜನ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿ ಹನುಮಂತ ದೇವರ ದರ್ಶನ ಪಡೆದರು. ಹನುಮ ಜಯಂತಿ ಅಂಗವಾಗಿ ದೇಗುಲದಲ್ಲಿ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.
ಬೆಳಗ್ಗೆ ಮೂರು ಗಂಟೆಯಿಂದಲೇ ಭಕ್ತರು 575ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲಿರುವ ಹನುಮಪ್ಪನ ದರ್ಶನ ಮಾಡಿ ಧರಿಸಿದ್ದ ಮಾಲೆ ತೆಗೆದರು. ಕೆಲವರು ರಾತ್ರಿಯೇ ಬೆಟ್ಟ ಹತ್ತಿ ದೇವಸ್ಥಾನದ ಪ್ರಾಂಗಣದಲ್ಲಿ ಮಲಗಿ ಬೆಳಗ್ಗೆ ಎರಡು-ಮೂರು ಗಂಟೆಯಲ್ಲಿಯೇ ದೇವರ ದರ್ಶನ ಮಾಡಿ ಮಾಲೆ ತೆಗೆದರು. ಬೆಟ್ಟದ ಮೇಲೆ ಹಬ್ಬದ ಸಂಭ್ರಮ ಮನೆ ಮಾಡಿದ್ದಲ್ಲದೆ, ಭಕ್ತರ ದಟ್ಟಣೆಯಿಂದಾಗಿ ಅಂಜನಾದ್ರಿಯಲ್ಲಿ ಸಂಚಾರ ಸಮಸ್ಯೆ ನಿರ್ಮಾಣವಾಗಿತ್ತು.
ಹೊರ ರಾಜ್ಯದ ಭಕ್ತರ ದಂಡು:ಕರ್ನಾಟಕದ ನಾನಾ ಜಿಲ್ಲೆಗಳಿಂದ ಮಾತ್ರವಲ್ಲ, ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡಿನಿಂದಲೂ ಭಕ್ತರು ಹನುಮನ ಮಾಲೆ ಧರಿಸಿಕೊಂಡು ಬಂದಿದ್ದರು. ಉತ್ತರ ಭಾರತದ ರಾಜಾಸ್ತಾನ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಪ್ರವಾಸಕ್ಕೆಂದು ಬಂದಿದ್ದ ಹಲವರು ಹನುಮ ಜಯಂತಿ ಅಂಗವಾಗಿ ಬೆಟ್ಟ ಏರಿ ದೇವರ ದರ್ಶನ ಮಾಡಿದರು. ಚುನಾವಣೆಯ ನೀತಿ ಸಂಹಿತೆ ಇರುವ ಕಾರಣಕ್ಕೆ ದೇಗುಲದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸದೇ ಇದ್ದರಿಂದ ಭಕ್ತರು ಉಪಹಾರ, ಊಟಕ್ಕೆ ಪರದಾಡುವಂತಾಗಿತ್ತು. ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಹನುಮನ ಭಕ್ತರು ಅಂಜನಾದ್ರಿಗೆ ಬಂದಿದ್ದರ ಪ್ರಭಾವ ಸಾಮಾನ್ಯ ಪ್ರವಾಸಿಗರಿಗೆ ಭಾರಿ ಸಮಸ್ಯೆಯಾಗಿತ್ತು.