ಗಂಗಾವತಿ(ಕೊಪ್ಪಳ): ಡಿ.24ರಂದು ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ನಡೆಯುವ ಹನುಮಮಾಲೆ ವಿರಮಣ ಕಾರ್ಯಕ್ರಮದ ಯಶಸ್ಸಿಗೆ ಈಗಾಗಲೇ ಪೂರ್ವಸಿದ್ಧತೆ ನಡೆಯುತ್ತಿದ್ದು, ಸಮಿತಿಗಳನ್ನು ರಚಿಸಿದ್ದೀರಿ. ಈ ಸಮಿತಿಗಳು ಕೇವಲ ಕಾಗದಕ್ಕೆ ಸೀಮಿತವಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಆವರಣದ ಮಂಥನ ಸಭಾಂಗಣದಲ್ಲಿ ಭಾನುವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಸಮಿತಿಗಳನ್ನು ರಚಿಸಿದರೆ ಸಾಲದು. ಅಧಿಕಾರಿಗಳು ಮೂರು ದಿನಗಳ ಕಾಲ ಅಲ್ಲೇ ಇದ್ದು ಎಲ್ಲ ವ್ಯವಸ್ಥೆಗಳನ್ನು ಮಾಡಬೇಕು. ಮುಖ್ಯವಾಗಿ, ಭಕ್ತಾದಿಗಳಿಗೆ ಪ್ರಸಾದಕ್ಕಿಂತ ಕುಡಿಯುವ ನೀರು ಮತ್ತು ಸ್ನಾನಕ್ಕೆ ನೀರು ಒದಗಿಸುವ ಕೆಲಸ ಮಾಡಬೇಕು. ಕಳೆದ ಬಾರಿಗಿಂತ ಈ ಬಾರಿ ಸರ್ಕಾರ ಅದ್ಧೂರಿಯಾಗಿ ಹನುಮಮಾಲೆ ವಿರಮಣ ಹಮ್ಮಿಕೊಂಡಿದೆ ಎಂದರು.
ರಾಜ್ಯದ ನಾನಾ ಜಿಲ್ಲೆಗಳಿಂದ ಬರುವ ಭಕ್ತರಿಗೆ ವಸತಿ, ಊಟ, ಶೌಚಾಲಯ, ಸ್ನಾನ ಸೇರಿದಂತೆ ಯಾವುದೇ ಸೌಲಭ್ಯದ ಕೊರತೆಯಾಗಬಾರದು. ಪಾರ್ಕಿಂಗ್ ವ್ಯವಸ್ಥೆ ಸೇರಿ ಆರೋಗ್ಯ ಸೌಲಭ್ಯವನ್ನು ಕಲ್ಪಿಸಬೇಕು. ಸಮಿತಿಗಳಿಗೆ ನಿಯೋಜಿತ ಅಧಿಕಾರಿಗಳು ದಿನದ 24 ಗಂಟೆಗಳ ಕಾಲವೂ ಲಭ್ಯವಿರುವಂತೆ ದಿನದ 8 ಗಂಟೆಗಳ ಕಾಲ ಶಿಫ್ಟ್ ಆಧಾರದಲ್ಲಿ ಕೆಲಸ ಮಾಡಬೇಕು. ಹನುಮ ಜಯಂತಿಯಂದು ಯಾವುದೇ ಸಂದರ್ಭದಲ್ಲಿ ನಾನು ಭೇಟಿ ನೀಡಲಿದ್ದು, ಅವ್ಯವಸ್ಥೆ ಕಂಡುಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.