ಗಂಗಾವತಿ, ಕೊಪ್ಪಳ: ಹನುಮ ಜಯಂತಿ ಅಂಗವಾಗಿ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಶನಿವಾರ ಭಕ್ತ ಸಾಗರವೇ ಹರಿದು ಬಂದಿತ್ತು. ರಾಜ್ಯದ ನಾನಾ ಜಿಲ್ಲೆ ತಾಲೂಕಿನಿಂದ 35 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಕೇವಲ ಕೊಪ್ಪಳ ಜಿಲ್ಲೆಯೊಂದರಿಂದಲೇ 20 ಸಾವಿರ ಹನುಮಮಾಲಾಧಾರಿಗಳು ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳನ್ನೂ ಪೂರೈಸಿದರು. ಹನುಮ ಮಾಲಾಧಾರಿಗಳು ಸೇರಿ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಲಿದ್ದಾರೆ ಎಂದು ಜಿಲ್ಲಾಡಳಿತ ನಿರೀಕ್ಷಿಸಿತ್ತು. ಆದರೆ, ಕೇವಲ 33ರಿಂದ 35 ಸಾವಿರ ಭಕ್ತರು ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಭಗವಂತ ಖೂಬಾ ಅಂಜನಾದ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪಂಚಮಸಾಲಿ ಪೀಠದ ಯೋಗಗುರು ವಚನಾನಂದ ಸ್ವಾಮೀಜಿ ಹಾಗೂ ಭವರಲಾಲ್ ಆರ್ಯ ನೆರೆದ ಭಕ್ತರಿಗೆ ಯೋಗ ಮತ್ತು ಸೂರ್ಯನಮಸ್ಕಾರ ತಿಳಿಸಿಕೊಟ್ಟರು. ಹನುಮಮಾಲೆ ಧರಿಸಿದ್ದ ಮಾಜಿ ಸಚಿವ ಶಿವರಾಜ ತಂಗಡಗಿ, ಹಾಲಿ ಶಾಸಕ ಬಸವರಾಜ ದಢೇಸ್ಗೂರು ಅಂಜನಾದ್ರಿಗೆ ಆಗಮಿಸಿ ಮಾಲಾ ವಿರಮಣ ಮಾಡಿದರು.