ಕುಷ್ಟಗಿ(ಕೊಪ್ಪಳ):ಸಿಎಂ ಯಡಿಯೂರಪ್ಪನವರೇ ಪಂಚಮಸಾಲಿ ಮಠಕ್ಕೆ 10 ಕೋಟಿ ರೂ. ಕೊಟ್ಟು ಪಂಚಮಸಾಲಿ ಒಡೆಯುವ ಕೆಲಸ ಮಾಡಬೇಡಿ. ನೀವು ಕೊಡುವ ಹಣದಿಂದ ಸಮಾಜ ಉದ್ಧಾರವಾಗುವುದಿಲ್ಲ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಿ ಎಂದು ಹುನಗುಂದ ಮಾಜಿ ಶಾಸಕ ಹಾಗೂ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸಿಎಂ ವಿರುದ್ಧ ಗುಡುಗಿದರು.
ಕೂಡಲಸಂಗಮದಿಂದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅವರು, ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಪಂಚಮಸಾಲಿ ಸಮಾಜವನ್ನು ಉದ್ದೇಶಿಸಿ ಮಾತನಾಡಿದರು.
ಹರಿಹರ ಪಂಚಮಸಾಲಿ ಪೀಠಕ್ಕೆ 10 ಕೋಟಿ ರೂ. ನೀಡುವುದಾಗಿ ಸಿಎಂ ಯಡಿಯೂರಪ್ಪನವರು ಹೇಳಿದ್ದು, ಆದರೆ ನಮ್ಮ ಮಠಗಳಿಗೆ ದುಡ್ಡು ಬೇಡ, 2ಎ ಮೀಸಲಾತಿ ಬೇಡಿಕೆಗೆ ಸ್ಪಂದಿಸಿ ಸಾಕು. ಸದರಿ ಮೀಸಲಾತಿ ನೀಡಿದರೆ ನಾವೇ ಇನ್ನೂ 20 ಕೋಟಿ ಹಾಕಿ ಸರ್ಕಾರಕ್ಕೆ ಕೊಡುತ್ತೇವೆ. ಮೀಸಲಾತಿ ಸಿಗುವುದರಿಂದ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜ ಉದ್ಧಾರವಾಗಲಿದೆಯೇ ಹೊರತು, ನೀವು ಕೊಡುವ ಹಣದಿಂದ ಅಲ್ಲ ಎಂದರು.
ಮುರುಗೇಶ್ ವಿರುದ್ಧ ಗುಡುಗು:
ಸಚಿವರಾಗಿರುವ ಮುರುಗೇಶ ನಿರಾಣಿಯವರು ಪಂಚಮಸಾಲಿ ಸಮಾಜದವರಾಗಿದ್ದು, ಈ ಪಾದಯಾತ್ರೆ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ನಿಮಗೆ ನಿಮ್ಮ ಸಮಾಜದ ಬಗ್ಗೆ ಕನಿಕರವಿದ್ದರೆ 2ಎ ಮೀಸಲಾತಿ ಕೊಡಿಸಬೇಕೆ ವಿನಃ ಗೊಂದಲ ಹೇಳಿಕೆಯಿಂದ ಸಮಾಜದ ದಿಕ್ಕು ತಪ್ಪಿಸುವ ಹೇಳಿಕೆ ನೀಡದಿರಿ ಎಂದು ನಿರಾಣಿ ಅವರಿಗೆ ಟಾಂಗ್ ನೀಡಿದರು.