ಕೊಪ್ಪಳ : ಆಂಜನೇಯನ ಜನ್ಮಸ್ಥಳ ವಿವಾದ ತಣ್ಣಗಾಗುತ್ತಿದ್ದಂತೆ ಗುಜರಾತ್ ಪ್ರವಾಸೋದ್ಯಮ ಇಲಾಖೆ ಪಂಪಾಸರೋವರದ ಕುರಿತು ಟ್ವೀಟ್ ಮಾಡುವ ಮೂಲಕ ಮತ್ತೊಂದು ಹೊಸ ವಿವಾದಕ್ಕೆ ಮುಂದಾಗಿದೆ. ಪಂಪಾ ಸರೋವರ ಹಿಂದೂ ಪುರಾಣದಲ್ಲಿ ಉಲ್ಲೇಖವಾಗಿರುವ ಐದು ಪವಿತ್ರ ಸರೋವರಗಳಲ್ಲಿ ಒಂದು. ಹಿಂದೂ ಪುರಾಣದ ಪ್ರಕಾರ ಪಂಪಾ ಸರೋವರವನ್ನು ಶಿವನ ಪತ್ನಿ ಪಾರ್ವತಿಯ ಒಂದು ರೂಪವಾದ ಪಂಪಾ, ಶಿವನಿಗೆ ತನ್ನ ಭಕ್ತಿ ತೋರ್ಪಸುವುದಕ್ಕೆ ತಪಸ್ಸು ಮಾಡಿದ ಸ್ಥಳ ಎಂದು ಹೇಳಲಾಗುತ್ತದೆ.
ಈ ಪಂಚ ಸರೋವರಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರ ನದಿಯ ದಕ್ಷಿಣ ಭಾಗದಲ್ಲಿ ಇರುವ ಪಂಪಾ ಸರೋವರ ಹಿಂದೂಗಳ ಪವಿತ್ರ ಸರೋವರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಐದು ಪವಿತ್ರ ಸರೋವರಗಳಿದ್ದು, ಅವುಗಳನ್ನು ಪಂಚ ಸರೋವರ ಎಂದು ಕರೆಯಲಾಗುತ್ತದೆ. ಆದರೆ, ಈ ಪಂಪಾ ಸರೋವರ ಕುರಿತು ಗುಜರಾತ್ ಪ್ರವಾಸೋದ್ಯಮ ಬೇರೆಯದ್ದೇ ಟ್ವೀಟ್ ಮಾಡಿದೆ.