ಕರ್ನಾಟಕ

karnataka

ETV Bharat / state

ಕೆಆರ್​ಪಿಪಿ ಪ್ರಣಾಳಿಕೆಯಲ್ಲಿದ್ದ ಯೋಜನೆಗಳನ್ನೇ ಕಾಂಗ್ರೆಸ್​​ ಜಾರಿಗೆ ತಂದಿದೆ : ಶಾಸಕ ಜನಾರ್ದನ ರೆಡ್ಡಿ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೆಆರ್​ಪಿಪಿ ಪಕ್ಷದ ಪ್ರಣಾಳಿಕೆಯ ಕಾಪಿಯಾಗಿದೆ ಎಂದು ಶಾಸಕ ಜನಾರ್ದನರೆಡ್ಡಿ ಹೇಳಿದರು.

ಶಾಸಕ ಜನಾರ್ದನ ರೆಡ್ಡಿ
ಶಾಸಕ ಜನಾರ್ದನ ರೆಡ್ಡಿ

By ETV Bharat Karnataka Team

Published : Aug 30, 2023, 5:46 PM IST

ಗಂಗಾವತಿ (ಕೊಪ್ಪಳ):ರಾಜ್ಯದಲ್ಲಿ ಅಧಿಕಾರಿ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅನುಷ್ಠಾನಕ್ಕೆ ತಂದಿರು ಗೃಹಲಕ್ಷ್ಮಿ, ಉಚಿತ ಸಾರಿಗೆ ಪ್ರಯಾಣ, ನಿರುದ್ಯೋಗ ಭತ್ಯೆ ಸೇರಿದಂತೆ ಬಹುತೇಕ ಯೋಜನೆಗಳು ನಮ್ಮ ಪಕ್ಷದ ಪ್ರಣಾಳಿಕೆಯಾಗಿದ್ದವು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಶಾಸಕ ಜಿ ಜನಾರ್ದರೆಡ್ಡಿ ಹೇಳಿದರು. ಸಿಎಂ ಸಂವಾದಕ್ಕೆ ಆಯ್ಕೆಯಾದ ಕೊಪ್ಪಳ ಜಿಲ್ಲೆಯ ಏಕೈಕ ಗ್ರಾಮ ಪಂಚಾಯಿತಿ ವಡ್ಡರಹಟ್ಟಿಯಲ್ಲಿ ಬುಧವಾರ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

"ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡುತ್ತಿರುವ ಯೋಜನೆಗಳ ಪೈಕಿ ಬಹುತೇಕವು ನಮ್ಮ ಪಕ್ಷದ ಪ್ರಣಾಳಿಕೆಯ ಕಾಪಿಯಾಗಿವೆ. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಸ್ವತಂತ್ರ ಪಕ್ಷ ಸ್ಥಾಪನೆ ಮಾಡಿ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಉಪಯುಕ್ತವಾಗಬಲ್ಲ ಏನೆಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎನ್ನುವುದರ ಬಗ್ಗೆ ಪ್ರಣಾಳಿಕೆ ನೀಡಲಾಗಿತ್ತು. ಈ ಪ್ರಣಾಳಿಕೆಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮಾಸಿಕ ಎರಡೂವರೆ ಸಾವಿರ, ಮಹಿಳೆಯರ ಪ್ರಯಾಣಕ್ಕೆ ಉಚಿತ ಸಾರಿಗೆ, ನಿರುದ್ಯೋಗಿ ಯುವಕರಿಗೆ ಭತ್ಯೆ ಸೇರಿದಂತೆ ಹತ್ತಾರು ಯೋಜನೆ ಘೋಷಣೆ ಮಾಡಲಾಗಿತ್ತು. ನಮ್ಮ ಪಕ್ಷದ ಪ್ರಣಾಳಿಕೆಗಳ ಮಾಹಿತಿ ಸಿದ್ದರಾಮಯ್ಯ ಅವರ ಕಿವಿಗೆ ಬಿದ್ದವೋ ಏನೋ ಗೊತ್ತಿಲ್ಲ. ಆದರೆ ಅಂಜನಾದ್ರಿ ಹನುಮಪ್ಪನ ಆಶೀರ್ವಾದದಿಂದ ನಮ್ಮ ಪ್ರಣಾಳಿಕೆಯ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಮೂಲಕ ಅನುಷ್ಠಾನವಾಗುತ್ತಿರುವುದು ಖುಷಿ ತಂದಿದೆ" ಎಂದರು.

ಚುನಾವಣೆ ಪೂರ್ವದಲ್ಲಿ ನಾನು ನೀಡಿದ ಭರವಸೆಯಂತೆ ಮಹಿಳೆಯರು ಮನೆಯಲ್ಲಿಯೇ ಕುಳಿತು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂಬ ಕಾರಣಕ್ಕೆ ಗಾರ್ಮೆಂಟ್​ ಉದ್ಯಮ ಮಾಡುವ ಭರವಸೆ ನೀಡಿದ್ದು, ಅತಿ ಶೀಘ್ರ ಈ ಯೋಜನೆಯನ್ನು ಜಾರಿಗೆ ತರುತ್ತೇನೆ. ಈ ಮೂಲಕ ನನ್ನ ಕ್ಷೇತ್ರದ ಸಾವಿರಾರು ಮಹಿಳೆಯರು ಮನೆಯಿಂದಲೇ ಉದ್ಯೋಗ ಮಾಡುತ್ತ ಮಾಸಿಕ ಸಾವಿರಾರು ರೂಪಾಯಿ ಸಂಪಾದಿಸುವಂತೆ ಮಾಡುತ್ತೇನೆ. ಮುಖ್ಯವಾಗಿ ಸರ್ಕಾರ ನೀಡುತ್ತಿರುವ ಎರಡು ಸಾವಿರ ರೂಪಾಯಿಗಳನ್ನು ಮಕ್ಕಳ ಶಿಕ್ಷಣ, ಆರೋಗ್ಯ, ಉಳಿತಾಯಕ್ಕೆ ಮೀಸಲು ಇಡಬೇಕು ಎಂದು ಶಾಸಕ ರೆಡ್ಡಿ ಸಲಹೆ ನೀಡಿದರು.

ಕಾಂಗ್ರೆಸ್​​ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅದ್ಧೂರಿಯಾಗಿ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ:ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಚಾಲನೆ.. ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ABOUT THE AUTHOR

...view details