ಕರ್ನಾಟಕ

karnataka

ETV Bharat / state

ಕೊಪ್ಪಳ: ಅಕಾಲಿಕ ಮಳೆ - ಮುಂದುವರಿದ ಚಳಿ - ರೈತರ ಪಾಲಿಗೆ ಹುಳಿಯಾದ ದ್ರಾಕ್ಷಿ..!

ಪ್ರತಿ ಕೆಜಿಗೆ ಈಗ ಮಾರುಕಟ್ಟೆಯಲ್ಲಿ 45 - 50 ರೂಪಾಯಿಗೆ ಮಾರಾಟವಾಗುತ್ತಿದೆ. ವ್ಯಾಪಾರಿಗಳು ರೈತರಿಂದ ಕೆಜಿಗೆ ಸುಮಾರು 25 ರಿಂದ 30 ರೂಪಾಯಿಗೆ ಖರೀದಿಸುತ್ತಿದ್ದಾರೆ. ಪ್ರತಿ ಎಕರೆಗೆ ಸುಮಾರು 2.20 ಲಕ್ಷ ರೂಪಾಯಿ ಖರ್ಚು ಮಾಡಿರುವ ರೈತರಿಗೆ ಒಂದು ಕಡೆ ಇಳುವರಿ ಇಲ್ಲ, ಮತ್ತೊಂದು ಕಡೆ ದರವೂ ಇಲ್ಲದೇ ಇರುವುದರಿಂದ ಮಾಡಿರುವ ಖರ್ಚು ಸಹ ಬರುವುದಿಲ್ಲ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರ ಮಲ್ಲಿಕಾರ್ಜುನ ಗಡಗಿ.

grapes
ದ್ರಾಕ್ಷಿ

By

Published : Feb 22, 2022, 5:57 PM IST

ಕೊಪ್ಪಳ:ಕಳೆದ ನವೆಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಹಾಗೂ ಮುಂದುವರಿದ ಚಳಿಯ ಪರಿಣಾಮವಾಗಿ ಈ ಬಾರಿ ದ್ರಾಕ್ಷಿ ರೈತರ ಪಾಲಿಗೆ ಸಿಹಿಯಾಗುವ ಬದಲು ಹುಳಿಯಾಗಿ ಪರಿಣಮಿಸಿದೆ. ಇಳುವರಿ ಕಡಿಮೆ ಬಂದರೂ ದ್ರಾಕ್ಷಿಗೆ ಈ ಬಾರಿ ಉತ್ತಮ ದರ ಇಲ್ಲದೇ ಇರುವುದರಿಂದ ದ್ರಾಕ್ಷಿ ಬೆಳೆದ ರೈತರು ಸಪ್ಪೆ ಮೊರೆ ಮಾಡಿಕೊಂಡು ಬದುಕಬೇಕಾಗಿದೆ.

ದ್ರಾಕ್ಷಿ ಬೆಳೆ ಕುಸಿತದ ಬಗ್ಗೆ ರೈತರು ಮಾತನಾಡಿದರು

ತೋಟಗಾರಿಕೆ ಬೆಳೆಗಳನ್ನು ಬೆಳೆಯುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಕೊಪ್ಪಳ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗಾರರ ಸಂಖ್ಯೆಯೂ ಹೆಚ್ಚಿಗಿದೆ. ಜಿಲ್ಲೆಯಲ್ಲಿರುವ ಸುಮಾರು 39 ಸಾವಿರ ಹೆಕ್ಟೇರ್​​​ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯ ಪೈಕಿ ಸುಮಾರು 1200 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯಲಾಗಿದೆ.

ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಳುವರಿ ಬರುತ್ತಿದ್ದ ದ್ರಾಕ್ಷಿ ಈ ಬಾರಿ ಶೇಕಡಾ 30 ರಷ್ಟು ಮಾತ್ರ ಇಳುವರಿ ಬಂದಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಕಳೆದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಿಂದಾಗಿ ಹೂವು ಕಟ್ಟುವ ಹಂತದಲ್ಲಿದ್ದ ದ್ರಾಕ್ಷಿ ಬೆಳೆಯು ಸಂಪೂರ್ಣವಾಗಿ ಹಾಳಾಗಿದೆ.

ನಡುವೆಯೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ಹೂವು ಕಟ್ಟಿದ್ದ ದ್ರಾಕ್ಷಿ ಈಗ ಇಳುವರಿ ಬರುತ್ತಿದೆ. ಆದರೆ, ಈಗಲೂ ಸಹ ಚಳಿ ವಾತಾವರಣ ಇರುವುದರಿಂದ ದ್ರಾಕ್ಷಿಯಲ್ಲಿ ಹುಳಿ ಕಡಿಮೆಯಾಗಿಲ್ಲ. ಈಗಲೂ ರಾಜ್ಯಾದ್ಯಂತ ಚಳಿ ಇರುವುದರಿಂದ ದ್ರಾಕ್ಷಿ ಮಾರಾಟ ಕಡಿಮೆ ಇದೆ ಎನ್ನಲಾಗುತ್ತಿದೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದಿಂದ ದ್ರಾಕ್ಷಿಯೂ ವಿದೇಶಕ್ಕೆ ರವಾನೆಯಾಗುತ್ತಿತ್ತು. ಅಕಾಲಿಕ ಮಳೆಯಿಂದಾಗಿ ಈ ಬಾರಿ ರಫ್ತು ಕಡಿಮೆ ಇದೆ. ದ್ರಾಕ್ಷಿ ಹಣ್ಣು ಗುಣಮಟ್ಟ ಸರಿ ಇಲ್ಲದ ಕಾರಣಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇದೇ ಕಾರಣಕ್ಕಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ದ್ರಾಕ್ಷಿ ದರ ಇಳಿಕೆಯಾಗಿದೆ ಎನ್ನುತ್ತಾರೆ ರೈತರು.

ಪ್ರತಿ ಕೆಜಿಗೆ ಈಗ ಮಾರುಕಟ್ಟೆಯಲ್ಲಿ 45-50 ರೂಪಾಯಿಗೆ ಮಾರಾಟವಾಗುತ್ತಿದೆ. ವ್ಯಾಪಾರಿಗಳು ರೈತರಿಂದ ಕೆಜಿಗೆ ಸುಮಾರು 25 ರಿಂದ 30 ರೂಪಾಯಿಗೆ ಖರೀದಿಸುತ್ತಿದ್ದಾರೆ. ಪ್ರತಿ ಎಕರೆಗೆ ಸುಮಾರು 2.20 ಲಕ್ಷ ರೂಪಾಯಿ ಖರ್ಚು ಮಾಡಿರುವ ರೈತರಿಗೆ ಒಂದು ಕಡೆ ಇಳುವರಿ ಇಲ್ಲ, ಮತ್ತೊಂದು ಕಡೆ ದರವೂ ಇಲ್ಲದೇ ಇರುವುದರಿಂದ ಮಾಡಿರುವ ಖರ್ಚು ಸಹ ಬರುವುದಿಲ್ಲ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರ ಮಲ್ಲಿಕಾರ್ಜುನ ಗಡಗಿ.

ಓದಿ:ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಅಕಾಡೆಮಿಯಿಂದ ಸಾಧಕರಿಗೆ ಜೀವಮಾನ ಪುರಸ್ಕಾರ ಪ್ರದಾನ..

ABOUT THE AUTHOR

...view details