ಗಂಗಾವತಿ:ರಾಜ್ಯದಲ್ಲಿ ಯಾವುದೇ ಸರಕಾರ ರಚನೆ ಆಗಬೇಕಿದ್ದರೂ, ಅಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ನಿರ್ಣಾಯಕವಾಗಲಿದೆ.ಇಂತಹದೊಂದು ಸನ್ನಿವೇಶ ರಾಜ್ಯದಲ್ಲಿ ನಿರ್ಮಾಣ ಆಗಲಿದೆ ಎಂದು ಕೆಆರ್ಪಿಪಿ ಸಂಸ್ಥಾಪಕ ಅಧ್ಯಕ್ಷ ಜಿ. ಜನಾರ್ದನರೆಡ್ಡಿ ಹೇಳಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಆಯೋಜಿಸಿದ್ದ ಕಾರ್ಯಕರ್ತರ ಬೃಹತ್ ರೋಡ್ ಶೋದಲ್ಲಿ ಅವರು ಮಾತನಾಡಿದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ರಾಜ್ಯದಲ್ಲಿ ಉನ್ನತ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಕಾಂಗ್ರೆಸ್ ನಾಯಕರು ಷಡ್ಯಂತ್ರ ಮಾಡಿದ್ದಾರೆ. ಆದರೆ ನನ್ನನ್ನು ಮುಗಿಸಲು ಅವರಿಂದ ಸಾಧ್ಯವಿಲ್ಲ. ಜನರ ಪ್ರೀತಿ, ವಿಶ್ವಾಸ, ವಾತ್ಸಲ್ಯ ದೇವರ ಆಶೀರ್ವಾದ ಇರೋವರೆಗೂ ಈ ರೆಡ್ಡಿಯನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದರು.
ಸರ್ಕಾರ ರಚನೆಯಲ್ಲಿ ಕೆಆರ್ಪಿಪಿ ಮಹತ್ವದ ಸ್ಥಾನ:ಈ ಬಾರಿ ಸರಕಾರ ರಚನೆಯಲ್ಲಿ ಕೆಆರ್ಪಿಪಿ ಮಹತ್ವದ ಸ್ಥಾನ ನಿಭಾಯಿಸಲಿದೆ. ಮುಂದಿನ 2028ರ ಚುನಾವಣೆ ಹೊತ್ತಿಗೆ ಇಡೀ ಕರ್ನಾಟಕದಲ್ಲಿ ಗಂಗಾವತಿ ಕೇಂದ್ರ ಸ್ಥಾನವನ್ನಾಗಿಸಿಕೊಂಡು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಧಿಕಾರಕ್ಕೆ ಬರಲಿದೆ. ಸ್ವತಂತ್ರ ಪಕ್ಷವಾಗಿ ಕೆರ್ಪಿಪಿ ಅಧಿಕಾರಕ್ಕೆ ಬರಲಿದೆ. ಮಾತನಾಡಲು ವಿಷಯ ಬಹಳಷ್ಟು ಇದೆ. ಆದರೆ, ಈಗ ಏನನ್ನೂ ಮಾತನಾಡಲಾರೆ. ಮುಂದೆ ಸಮಯ ಸಿಕ್ಕೆ ಸಿಗುತ್ತದೆ. ಸಿಕ್ಕಾಗ ಎಲ್ಲವನ್ನೂ ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ಹೇಳಿದರು.
ಬೃಹತ್ ರೋಡ್ ಶೋ:ಇದಕ್ಕೂ ಮುನ್ನ ನಗರದ ತಾಲೂಕು ಕ್ರೀಡಾಂಗಣದಿಂದ ರೆಡ್ಡಿ ಬೃಹತ್ ರೋಡ್ ಶೋ ನಡೆಸಿದರು. ತೆರೆದ ವಾಹನದಲ್ಲಿ ಪತ್ನಿ ಲಕ್ಷ್ಮಿ ಅರುಣಾ, ಪುತ್ರಿ ಬ್ರಹ್ಮಿಣಿ ಸೇರಿದಂತೆ ಪಕ್ಷದ ನಾನಾ ಮುಖಂಡರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದರು.