ಕುಷ್ಟಗಿ: 'ವಿದ್ಯಾರ್ಥಿಗಳು ಗುಡುಗಿದರೆ, ವಿಧಾನ ಸೌಧ ನಡುಗುವುದು' ಎಂಬ ಘೋಷಣೆಯೊಂದಿಗೆ ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಇಂದು (ಸೋಮವಾರ) ತರಗತಿ ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರ ಗೈರು..ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಆಕ್ರೋಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಸೇವಾ ಭದ್ರತೆ, ಹುದ್ದೆ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ.10 ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ.
53 ಅತಿಥಿ ಉಪನ್ಯಾಸಕರು ಕಾಲೇಜಿಗೆ ಸತತ ಗೈರಾಗಿದ್ದು, ತರಗತಿಗಳು ನಡೆಯುತ್ತಿಲ್ಲ. ಈ ಹಿನ್ನೆಲೆ 1,700ಕ್ಕೂ ಅಧಿಕ ಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಬಸವೇಶ್ವರ ವೃತ್ತದಿಂದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು. ಆದರೆ, 1700 ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳ ಪ್ರತಿಭಟನೆ ಬಂದೋಬಸ್ತ್ಗೆ ಪೊಲೀಸ್ ಸಿಬ್ಬಂದಿ ಕೊರತೆಯಿತ್ತು. ಅಂಜನಾದ್ರಿಗೆ ಭದ್ರತೆ ಒದಗಿಸಲು ಪೊಲೀಸರು ಹೋಗಿದ್ದರಿಂದ ತಹಶೀಲ್ದಾರರ ಕಚೇರಿಗೆ ಮಾತ್ರ ಪ್ರತಿಭಟನಾ ಮೆರವಣಿಗೆಗೆ ಅವಕಾಶ ಕಲ್ಪಿಸಲಾಯಿತು. ನಂತರ ತಹಶೀಲ್ದಾರರ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಸಂಚರಿಸಿ ತಹಶೀಲ್ದಾರ್ ಎಂ.ಸಿದ್ದೇಶ್ಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ನಾಗರಾಜ್ ಹಜಾಳ, 1700 ವಿದ್ಯಾರ್ಥಿಗಳಿರುವ ಕುಷ್ಟಗಿ ಕಾಲೇಜಿನ ವಿದ್ಯಾರ್ಥಿಗಳನ್ನು ಕುಷ್ಟಗಿ ತಾಲೂಕು ಆಡಳಿತ ಸಂಭಾಳಿಸಿಲ್ಲ. ಇನ್ನೂ ರಾಜ್ಯಾದ್ಯಂತ ಮುಷ್ಕರ ನಡೆದರೆ ಸರ್ಕಾರ ಹೇಗೆ ಸಂಭಾಳಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಸರ್ಕಾರ ಕೆಳಗಿಳಿಸುವ ಶಕ್ತಿ ಇದೆ ಎಂದರು.
ಕಳೆದ ಡಿ.10 ರಿಂದ ಉಪನ್ಯಾಸಕರಿಲ್ಲದೇ ಕಾಲೇಜಿಗೆ ಬಂದು ಹೋಗುವಂತಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಸರ್ಕಾರ ಖಾಯಂ ಉಪನ್ಯಾಸಕರು ನೇಮಿಸಿ, ಸಾಧ್ಯವಾಗದೇ ಇದ್ದಲ್ಲಿ, ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.