ಕುಷ್ಟಗಿ(ಕೊಪ್ಪಳ):ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಉತ್ಸುಕರಾಗಿದ್ದು, ಕೋವಿಡ್ ಮುನ್ನೆಚ್ಚರಿಕೆ ವಹಿಸಿಕೊಂಡು ಪರೀಕ್ಷೆ ನಡೆಸಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಪರೀಕ್ಷೆ ಬಗ್ಗೆ ಮಾತನಾಡಿದ ಶಾಸಕ ಬಯ್ಯಾಪೂರ ಇಲ್ಲಿನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಕಾಲದಲ್ಲೂ ಪರೀಕ್ಷೆ ಬರೆಯಲು ಉತ್ಸುಕರಾಗಿರುವ ವಿದ್ಯಾರ್ಥಿಗಳಿಗೆ ನಿರಾಸೆಯಾಗದೆ ಇರಲು ಈ ನಿಟ್ಟಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆಯುವೆ. ಕಳೆದ ಬಾರಿ ಕೊರೊನಾ ಸಂಧರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷ ಹಾಗೂ ಪದವಿ ಅಂತಿಮ ವರ್ಷದ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದೆ. ಅದರಂತೆ ಈಗಲೂ ಕೂಡ ಜಿಜ್ಞಾಸೆಗೆ ಒಳಗಾಗದೇ ಕಡ್ಡಾಯ ಪರೀಕ್ಷೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸಾರ್ವಜನಿಕ ಶಿಕ್ಷಣ, ಪದವಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಷರು, ಸೇವೆಯಲ್ಲಿರುವ ಶಿಕ್ಷಕರು, ನಿವೃತ್ತಿಯಾದ ಶಿಕ್ಷಕರ ಸಲಹೆ ಮೇರೆಗೆ ಪರೀಕ್ಷೆ ನಡೆಸುವ ಇರಾದೆ ವ್ಯಕ್ತವಾಗಿದೆ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷದ ಪ್ರತಿಭಾನ್ವಿತರಿಗೆ ಅನ್ಯಾಯವಾಗಲಿದೆ. ಮುಂದೆ ಉದ್ಯೋಗಾವಕಾಶದಲ್ಲಿ ರೋಸ್ಟರ್, ಮೆರಿಟ್ ಆಯ್ಕೆ ಮಾಡಲಾಗುತ್ತದೆ. ಸದರಿ ವರ್ಷದಲ್ಲಿ ಪರೀಕ್ಷೆ ಬರೆಯದೆ ಪಾಸಾದರೆ ಮೆರಿಟ್ ಮೇಲೆ ಆಯ್ಕೆ ಮಾಡಲು ಗೊಂದಲವಾಗುತ್ತದೆ. ಡಿ ದರ್ಜೆ ಹಾಗೂ ಸಿಇಟಿ ಪರೀಕ್ಷೆ ನೇಮಕಾತಿಯಲ್ಲಿ ತಾಂತ್ರಿಕ ನ್ಯೂನತೆ ಕಾಣಿಸಿಕೊಳ್ಳಲಿದೆ. ಪರೀಕ್ಷೆ ಬರೆದು ಪಾಸಾದವರಿಗೆ ಮುಂದೆ ಮುಂದಿನ ವಿದ್ಯಾಬ್ಯಾಸ, ಉದ್ಯೋಗಾವಕಾಶದ ಆಯ್ಕೆಗೆ ಸಾಕಷ್ಟು ಅವಕಾಶಗಳಿರುತ್ತವೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಳೆದ ವರ್ಷದಲ್ಲಿ ಪರೀಕ್ಷೆ ನಡೆಸಿದಂತೆ ಈ ವರ್ಷವೂ ಪರೀಕ್ಷೆ ನಡೆಸಬೇಕು ಎಂದರು.
ಪರೀಕ್ಷೆ ಸಂಧರ್ಭದಲ್ಲಿ ಕೊರೊನಾ ವೈರಸ್ ವಿದ್ಯಾರ್ಥಿಗಳಿಗೆ ಅಂಟಿದರೆ ಹೇಗೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಶೇ. 99.9ರಷ್ಟು ಒಳ್ಳೆಯ ಕೆಲಸ ಆಗಿದ್ದರೂ ಶೇ. 0.01ರಷ್ಟು ತೊಂದರೆಗಳು ಆಗುವುದು ಸಹಜವಾಗಿರುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸದೆ ಪಾಸ್ ಮಾಡಬಾರದು. ಬದಲಿಗೆ ಶೈಕ್ಷಣಿಕ ವರ್ಷವನ್ನು ಹಾಗೆಯೇ ಕಳೆಯಬೇಕು. ಒಂದು ವರ್ಷ ಅಂತರವಿದ್ದರೆ ಎನೂ ತೊಂದರೆಯಾಗದು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಇದ್ದರೆ ಅದೇ ವರ್ಷದ ತರಗತಿಯಲ್ಲಿ ಉಳಿಸಬೇಕು. ದೇಶದ ಪ್ರಧಾನಿ ಹಾಗೆಯೇ ಪಾಸ್ ಮಾಡಲು ತಿಳಿಸಿರುತ್ತಾರೆ, ಇದನ್ನು ನಾನು ಒಪ್ಪುವುದಿಲ್ಲ ಎಂದರು.