ಕೊಪ್ಪಳ: ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಸಿಬ್ಬಂದಿ ಬಾರದ ಹಿನ್ನೆಲೆ ಕೊಪ್ಪಳದಲ್ಲಿ ಅಧಿಕಾರಿಗಳು ಸಾರಿಗೆ ಸಂಸ್ಥೆಯಲ್ಲಿ ಪರ್ಯಾಯ ಹುದ್ದೆ ಹೊಂದಿರುವ ಸಿಬ್ಬಂದಿಯನ್ನು ಬಳಸಿಕೊಂಡು ಕೆಲ ಬಸ್ಗಳನ್ನು ಇಂದು ರಸ್ತೆಗೆ ಇಳಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ನಾಲ್ಕನೇ ದಿನವಾದ ಇಂದು ಕೊಪ್ಪಳದಲ್ಲಿಯೂ ಸಹ ಬಹಳಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ಬೆಂಬಲಿಸಿದ್ದಾರೆ.
ಈ ನಡುವೆ ಅಮಾನತಾಗಿರುವ ಸಿಬ್ಬಂದಿಗೆ ಮತ್ತೆ ಅಮಾನತು ರದ್ದುಪಡಿಸಿ ಕರ್ತವ್ಯಕ್ಕೆ ಕರೆಸಿಕೊಂಡು ಒಂದಿಷ್ಟು ಬಸ್ಗಳನ್ನು ರಸ್ತೆಗಿಳಿಸಿದ್ದ ಅಧಿಕಾರಿಗಳು, ಇಂದು ವಿವಿಧ ಕಾರಣಗಳಿಂದ ದೈಹಿಕ ಅನ್ಫಿಟ್ ಆಗಿ ಪರ್ಯಾಯ ಹುದ್ದೆ ನಿರ್ವಹಿಸುತ್ತಿದ್ದ ಸಿಬ್ಬಂದಿ ಮೂಲಕ ಬಸ್ ಕಾರ್ಯಾಚರಣೆ ನಡೆಸಿದ್ದಾರೆ.
ಇದರ ಜತೆಗೆ ಬಸ್ ನಿಲ್ದಾಣದಲ್ಲಿನ ಕಂಟ್ರೋಲರ್ಗಳನ್ನು ನಿರ್ವಾಹಕ ಕರ್ತವ್ಯಕ್ಕೆ ಕಳಿಸಿದ್ದಾರೆ. ಇಂದು ಕೊಪ್ಪಳದಿಂದ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ 16 ಬಸ್ಗಳು ಸಂಚಾರ ನಡೆಸಿವೆ ಎಂದು ತಿಳಿದು ಬಂದಿದೆ.