ಕುಷ್ಟಗಿ: ಗೀಯ ಗೀಯ ಗೀಗೀ ಹರೇ ಗೀಯ ಗಾ... ಇಂತಹ ನೂರಾರು ಗೀಗಿ ಪದಗಳ ಕಣಜ ಎಂದೇ ಖ್ಯಾತಿ ಪಡೆದ ಹಿರೇಗೊಣ್ಣಾಗರದ ದೇವದಾಸಿ ಮುದಕವ್ವ ಗಂಜಿಹಾಳ ಮಾದರ ಅವರು ದಣಿವಿಲ್ಲದೇ ಹಾಡುವ ತಾಲೂಕಿನ ಏಕೈಕ ಗೀಗಿ ಪದಗಾರ್ತಿ.
ತನ್ನ ತಾಯಿ ದ್ಯಾಮವ್ವ ಅವರಿಂದ ಸಂಪ್ರದಾಯ ಪದಗಳನ್ನು ಹಾಡುವುದನ್ನು ಕಲಿತ ಮುದಕವ್ವ, ತಮ್ಮ 12ನೇ ವಯಸ್ಸಿನಲ್ಲಿ ಹಾಡಲು ಶುರು ಮಾಡಿದ್ದು ಜೀವನ ವೃತ್ತಿಯಾಗಿದೆ. ಇಳಕಲ್ನ ಪಕೀರಪ್ಪ ವಾಲ್ಮೀಕಿ ಅವರಲ್ಲಿ ಗೀಗಿ ಪದಗಳನ್ನು ಕಲಿತ ಮುದಕವ್ವ, ಗೀಗಿ ಪದ ಪರಂಪರೆಯನ್ನು ಮುಂದುವರೆಸಿದ್ದಾರೆ. ಮೂಲ ಜಾನಪದ ದಾಟಿಯಲ್ಲಿ ಹಾಡುತ್ತಾರೆ.
ಗೀಗಿ ಪದಕಾರ ತಂಡ ಕಟ್ಟಿಕೊಂಡಿದ್ದು, ಅವರ ತಂಡದಲ್ಲಿ ಮುಮ್ಮೇಳದಲ್ಲಿ ಮುದುಕವ್ವ ಹಲಗೆ ನುಡಿಸುತ್ತಾ ಹಾಡುತ್ತಿದ್ದರೆ, ಹಿಮ್ಮೇಳದಲ್ಲಿ ಅವರ ಮಗ ಮುದಕಪ್ಪ ಗಂಜಿಹಾಳ ಚೌಡಕಿ ನುಡಿಸುತ್ತಾರೆ. ಖಾಜಾಹುಸೇನ್ ಎಂಬುವರು ಅತ್ತಾರ ತಾಳ ನುಡಿಸುತ್ತಾರೆ.
ಈ ಗೀಗಿ ಪದಗಳಲ್ಲಿ ಗಂಡು ಹೆಣ್ಣಿನ ವಾದ - ಪ್ರತಿವಾದ ಮೇಳೈಸುತ್ತದೆ. ಇದಕ್ಕೆ ಹರದೇಶಿ-ನಾಗೇಶಿ ಎನ್ನಲಾಗುತ್ತಿದೆ. ಗಂಡು ಮೇಳಕ್ಕೆ ಹರದೇಶಿ ಎಂದು ಹೆಣ್ಣು ಮೇಳಕ್ಕೆ ನಾಗೇಶಿ ಎಂದು ಕರೆಯಲಾಗುತ್ತದೆ. ಹರದೇಶಿ ಮೇಳದಲ್ಲಿ ದಾವಲಸಾಬ್ ಅತ್ತಾರ, ನಾಗೇಶಿ ಮೇಳದಲ್ಲಿ ಮುದಕವ್ವ ಗಂಜಿಹಾಳ ಜುಗಲ್‍ಬಂಧಿ ಕೇಳುವುದೇ ಮಜಾ. ಈ ತಂಡ ಈಗಾಗಲೇ ಹಾವೇರಿ, ಬಾಗಲಕೋಟೆ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಅನೇಕ ಕಾರ್ಯಕ್ರಮ ನೀಡಿದ್ದಾರೆ.