ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದ್ದು, ಪಾಸಿವಿಟಿ ದರ ಶೇಕಡಾ 4.87ಕ್ಕೆ ಇಳಿಕೆಯಾಗಿದೆ. ಹೀಗಾಗಿ ಜಿಲ್ಲಾಡಳಿತ ಕೆಲ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಗಿತಗೊಳಿಸುತ್ತಿದೆ.
ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ಗುಣಮುಖರನ್ನಾಗಿಸಿದ ಕೊಪ್ಪಳದ ಗವಿಮಠದ ಕೋವಿಡ್ ಆರೈಕೆ ಕೇಂದ್ರವನ್ನು ಇಂದಿನಿಂದ ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯ ಎಲ್ಲ ಕೋವಿಡ್ ಆಸ್ಪತ್ರೆಗಳಿಗಿಂತ ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ ಶೇಕಡಾವಾರು ಗುಣಮುಖರಾದವರ ಪ್ರಮಾಣ ಹೆಚ್ಚಾಗಿತ್ತು. ಅಲ್ಲಿನ ವ್ಯವಸ್ಥೆ ಹೇಗಿತ್ತು? ಉಳಿದ ಆಸ್ಪತ್ರೆಗಿಂತ ಗವಿಮಠದ ಕೋವಿಡ್ ಆಸ್ಪತ್ರೆ ಹೇಗೆ ಭಿನ್ನವಾಗಿತ್ತು ಎಂಬುದನ್ನು ಸ್ವತಃ ಅಧಿಕಾರಿಗಳೇ ಮೆಲುಕು ಹಾಕಿದ್ದಾರೆ.
ಗವಿಮಠದ ಕೋವಿಡ್ ಆರೈಕೆ ಕೇಂದ್ರ ಸ್ಥಗಿತ ಮೇ ಆರಂಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಸೋಂಕಿತರು ಬೆಡ್, ಆಕ್ಸಿಜನ್ಗಾಗಿ ಪರದಾಡುತ್ತಿದ್ದರು. ದಿನಕ್ಕೆ ಸುಮಾರು 500ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಗವಿಮಠದ ಶ್ರೀಗಳಲ್ಲಿ ಮನವಿ ಮಾಡಿದ್ದರು. ಶ್ರೀಗಳು ಸಹ ಮೊದಲೇ ಆಲೋಚಿಸಿದಂತೆ ಜಿಲ್ಲಾಡಳಿತದ ಸಹಯೋಗದಲ್ಲಿ ಶ್ರೀಮಠದ ವೃದ್ಧಾಶ್ರಮದ ಕಟ್ಟಡದಲ್ಲಿ 100 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ಮೇ. 11ರಂದು ಪ್ರಾರಂಭಿಸಿದರು.
ಜಿಲ್ಲೆಯಲ್ಲಿನ ಉಳಿದ ಕೋವಿಡ್ ಆರೈಕೆ ಕೇಂದ್ರಗಳಿಗಿಂತ ಗವಿಮಠದ ಕೋವಿಡ್ ಆಸ್ಪತ್ರೆ ಭಿನ್ನವಾಗಿತ್ತು. ಸೋಂಕಿತರಿಗೆ ಶ್ರೀಮಠದಿಂದ ಊಟ, ಉಪಹಾರ, ಹಣ್ಣು-ಹಂಪಲು, ಶ್ರೀಗಳ ಆತ್ಮವಿಶ್ವಾಸದ ಸಂದೇಶ, ಯೋಗ, ಪ್ರಾಣಾಯಾಮ, ಕೇರಂ ಆಟ ಹಾಗೂ ಅಲ್ಲಿನ ಸಿಬ್ಬಂದಿಯ ಸೇವೆಯಿಂದ ಅಲ್ಲಿ ದಾಖಲಾಗಿದ್ದ ಸೋಂಕಿತರು ಬೇಗ ಚೇತರಿಸಿಕೊಳ್ಳುತ್ತಿದ್ದರು. ಶೇ. 40ರಷ್ಟು ಸ್ಯಾಚುರೇಷನ್ ಇದ್ದ ಗಂಭೀರ ಸ್ಥಿತಿಯಲ್ಲಿದ್ದವರೂ ಸಹ ಇಲ್ಲಿ ಪವಾಡವೆಂಬಂತೆ ಗುಣಮುಖರಾಗಿ ತೆರಳಿದ್ದಾರೆ.
ಮೇ 11ರಿಂದ ಒಂದು ತಿಂಗಳ ಕಾಲದಲ್ಲಿ ಈ ಕೇಂದ್ರದಲ್ಲಿ 315 ಸೋಂಕಿತರು ದಾಖಲಾಗಿದ್ದರು. ಆ ಪೈಕಿ 20 ಸೋಂಕಿತರು ಅಸುನೀಗಿದ್ದಾರೆ. ಆದರೆ ಜಿಲ್ಲೆಯ ಉಳಿದ ಕೋವಿಡ್ ಆಸ್ಪತ್ರೆಗಳಿಗೆ ಹೋಲಿಸಿದರೆ ಗವಿಮಠದ ಕೋವಿಡ್ ಕೇಂದ್ರದಲ್ಲಿ ಗುಣಮುಖರಾದವರ ಪ್ರಮಾಣ ಶೇಕಡಾ 94 ಇತ್ತು ಎಂದು ಸ್ವತಃ ಆರೋಗ್ಯ ಇಲಾಖೆಯ ಅಧಿಕಾರಿಗಳೇ ಹೇಳುತ್ತಾರೆ. ಅಲ್ಲದೆ ಇದು ಸ್ಥಳದ ಮಹಿಮೆ ಎಂದು ಹೇಳಬಹುದು ಎನ್ನುತ್ತಾರೆ. ಗಂಭೀರ ಪರಿಸ್ಥಿತಿಯಲ್ಲಿ ಬಂದು ಇಲ್ಲಿ ಚಿಕಿತ್ಸೆ ಪಡೆದು ಅನೇಕರು ಗುಣಮುಖರಾಗಿದ್ದಾರೆ. ಇದೆಲ್ಲಾ ಗವಿಮಠದ ಹಾಗೂ ಶ್ರೀಗಳ ಕೃಪೆ ಎಂದು ಗುಣಮುಖರಾದವರು ಸ್ಮರಿಸುತ್ತಾರೆ.