ಕೊಪ್ಪಳ :ಕೊರೊನಾದಿಂದಾಗಿ ಕಳೆದ ಎರಡು ವರ್ಷದಿಂದ ಸರಳವಾಗಿ ನಡೆದಿದ್ದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವವು ಭಾನುವಾರ ಸಂಜೆ ವೈಭವದಿಂದ ಕೋಟ್ಯಂತರ ಜನರ ಸಮ್ಮುಖದಲ್ಲಿ ಜರುಗಿತು. ದೇಶದಲ್ಲಿ ಅತಿ ಹೆಚ್ಚು ಜನರು ಒಂದೆಡೆ ಸೇರುವ ಧಾರ್ಮಿಕ ಸಮಾರಂಭಗಳಲ್ಲಿ ಮೊದಲ ಸ್ಥಾನ ಕುಂಭಮೇಳಕ್ಕಿದೆ. ಆದರೆ, ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ, ಮಠದ ಮುಂದಿನ ಬೃಹತ್ ಬಯಲಿನಲ್ಲಿ ನಡೆಯುವುದರಿಂದ, ಅತಿ ಹೆಚ್ಚು ಜನರನ್ನು ಒಂದೆಡೆ ಕಾಣುವ ಕಾರಣಕ್ಕಾಗಿ ದಕ್ಷಿಣ ಭಾರತದ ಕುಂಭಮೇಳ ಎಂದು ಇದು ಹೆಸರುವಾಸಿಯಾಗಿದೆ.
ಸದ್ಗುರು ಅವರಿಂದ ರಥೋತ್ಸವಕ್ಕೆ ಚಾಲನೆ : ಈ ಬಾರಿಯ ರಥೋತ್ಸವಕ್ಕೆ ಇಶಾ ಪೌಂಡೇಶನ್ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಚಾಲನೆ ನೀಡಿದರು. ಬಳಿಕ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಜಾತ್ರೆಯಲ್ಲಿ ಭಕ್ತಿಯ ಸಾಗರವೇ ಹರಿದಿದೆ. ನದಿಯಂತೆ ಭಕ್ತರು ಹರಿದು ಬಂದಿದ್ದಾರೆ. ಎಷ್ಟೋ ಜನ ಸಾಧು ಸಂತರು ಈ ಭೂಮಿಯಲ್ಲಿ ತಮ್ಮ ಕೆಲಸ ಮುಗಿದ ಬಳಿಕ ತಮ್ಮ ಕಾಯ ಬಿಟ್ಟು ಹೋಗಿದ್ದಾರೆ. ಆದರೆ, 11ನೇ ಪೀಠದ ಗವಿಸಿದ್ದೇಶ್ವರ ಸ್ವಾಮಿಗಳು ತಾವು ಜೀವಂತವಿರುವಾಗಲೇ ತಮ್ಮ ಕಾಯವನ್ನು ನೂರಾರು ವರ್ಷಗಳ ಹಿಂದೆ ಬಿಟ್ಟು ಹೋಗಿದ್ದಾರೆ. ಅವರ ಜೀವಂತ ಸಮಾಧಿಯಾದ ದಿನದ ನೆನಪಿಗಾಗಿ ರಥೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಈ ವಿಚಾರ ನನ್ನ ಹೃದಯ ಗೆದ್ದಿದೆ ಎಂದರು.
ಗವಿಸಿದ್ದೇಶರು ಬದುಕಿದ್ದಾರೆ ಎನ್ನುವುದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ: ಈ ಮಹಾರಥೋತ್ಸವಕ್ಕೆ ಇಷ್ಟೊಂದು ಜನರು ಸೇರಿರುವುದು ಗವಿಯಲ್ಲಿರುವ ಗವಿಸಿದ್ದೇಶರು ಇನ್ನು ಬದುಕಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂದು ಹೇಳಿದರು. ಇದು ದೇಶದ ಸಂಸ್ಕೃತಿ ಮತ್ತು ನಾಗರೀಕತೆಯನ್ನು ಪ್ರತಿ ಬಿಂಬಿಸುತ್ತದೆ. ಅವರು ಬದುಕಿದ್ದಾರೆ ಎನ್ನುವ ರೀತಿಯಲ್ಲಿ ಜನ ಸಂಭ್ರಮಿಸುತ್ತಿದ್ದಾರೆ. ಇಷ್ಟೊಂದು ಜನರನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲ. ದೈವ ಭಕ್ತಿಯೊಂದರಿಂದ ಮಾತ್ರ ಇದು ಸಾಧ್ಯ. ಅವರ ಶಕ್ತಿಗೆ ಮತ್ತು ಜನರ ಭಕ್ತಿಗೆ ನಾನು ಮನಸೋತಿದ್ದೇನೆ. ಇಂದಿನ ಪೀಳಿಗೆಗೆ ದೈವೀ ಶಕ್ತಿಯ ಪ್ರೇರಣೆಯಾಗುತ್ತದೆ. ಇಂತಹ ಸಂಸ್ಕೃತಿ ಭಾರತ ದೇಶದಲ್ಲಿ ಕಾಣಲು ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯೋಗ ವೈಜ್ಞಾನಿಕವಾದದ್ದು: ಶಿವ ಕೇವಲ ಇತಿಹಾಸ ಎಂದು ಭಾವಿಸಬೇಕಿಲ್ಲ. ಭವಿಷ್ಯವು ಹೌದು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜನ ಒಪ್ಪಿಕೊಳ್ಳಲು ತಯಾರಿದ್ದಾರೆ. ಹೀಗಾಗಿ ಯೋಗವನ್ನು ವೈಜ್ಞಾನಿಕ ಮಾದರಿ ಹಾಗೂ ಶಿಸ್ತು ಬದ್ಧ ಮಾದರಿಯಲ್ಲಿ ಜನರಿಗೆ ಮುಟ್ಟಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಶಿವನನ್ನು ಹಲವು ರೂಪಗಳಲ್ಲಿ ಕಾಣುತ್ತಿದ್ದೇವೆ. ಅದರಲ್ಲಿ ಸಿದ್ದೇಶ್ವರ, ಯೋಗೇಶ್ವರ ಮೂಲಕವು ಭಕ್ತಿ ವ್ಯಕ್ತವಾಗುತ್ತದೆ. 21 ನೇ ಶತಮಾನದಲ್ಲಿ ಯೋಗೇಶ್ವರ ಅತ್ಯಂತ ಪ್ರಮುಖವಾದದ್ದು. ಯೋಗ ವೈಜ್ಞಾನಿಕವಾದದ್ದು. ಈ ಮೂಲಕ ಮೊದಲ ಬಾರಿಗೆ ಮಾನವ ಕುಲ ಎದುರಿಸುವ ಸಮಸ್ಯೆಗಳಿಗೆ ತಾರ್ಕಿಕ ಪರಿಹಾರಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.