ಗಂಗಾವತಿ:ತಾಲೂಕಿನ ಮರಳಿ ಹಾಗೂ ಹೇಮಗುಡ್ಡದ ಬಳಿ ಇರುವ ಗಂಗಾವತಿ-ಸಿಂಧನೂರು ಟೋಲ್ ವೇ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಎರಡು ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವಿದೆ.
ಈವರೆಗೂ ಇದ್ದ ದ್ವಿಮುಖ ಸಂಚಾರ ನೀತಿ ರದ್ದು ಮಾಡಿರುವ ಸಂಸ್ಥೆ ಏಕಮುಖ ಸಂಚಾರಕ್ಕೆ ಮಾತ್ರ ಶುಲ್ಕ ಪಡೆಯುತ್ತಿದೆ. ಇದು ವಾಹನ ಸಂಚಾರಿಗಳಿಗೆ ಸಮಸ್ಯೆಯಾಗಿದೆ. ಈಗಾಗಲೇ ಕೊರೊನಾ ಲಾಕ್ಡೌನ್ನಿಂದ ದುಡಿಮೆ ಇಲ್ಲ. ಇದರ ಮೇಲೆ ಇಂತಹ ಹೊರೆ ಬೇರೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಮೇಶ ನಾಯಕ್ ಎಂಬುವವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೋಲ್ ಪ್ಲಾಜಾದ ಮ್ಯಾನೇಜರ್ ನರೇಶ, ಕೇಂದ್ರ ಸರ್ಕಾರ ಫೆ.15ರಿಂದಲೇ ಫಾಸ್ಟ್ ಟ್ಯಾಗ್ ನಿಯಮ ಕಡ್ಡಾಯವಾಗಿ ಜಾರಿ ಮಾಡಿದೆ. ಇದನ್ನು ಅಳವಡಿಸಿಕೊಳ್ಳದ ವಾಹನ ಚಾಲಕರ ಮೇಲೆ ದಂಡ ವಿಧಿಸುವಂತೆ ಸೂಚಿಸಲಾಗಿದೆ. ಆದರೆ ನಾವು ಯಾವುದೇ ದಂಡ ಹಾಕುತ್ತಿಲ್ಲ. ಬದಲಿಗೆ ದ್ವಿಮುಖ ಸಂಚಾರ ಸ್ಥಗಿತಗೊಳಿಸಿದ್ದೇವೆ ಎಂದರು.
ಇದನ್ನೂ ಓದಿ:ಸಿಎಂ ಯಡಿಯೂರಪ್ಪಗೆ ದೀರ್ಘದಂಡ ನಮಸ್ಕಾರ ಹಾಕಿದ ನೂತನ ಶಾಸಕ ಸಲಗರ್
ಈ ಮೊದಲು ಗಂಗಾವತಿಯಿಂದ ಕಾರಟಗಿ ಹಾಗೂ ಗಂಗಾವತಿ-ಎನ್.ಎಚ್. ಬೂದಗುಂಪಾದವರೆಗೆ ಏಕ ಮುಖ ಸಂಚಾರಕ್ಕೆ ರೂ.35 ಇತ್ತು. ದ್ವಿಮುಖ ಸಂಚಾರಕ್ಕೆ ರೂ. 50 ಇತ್ತು. ಆದರೆ ಈಗ ಏಕಮುಖ ಸಂಚಾರದಿಂದಾಗಿ ಜನರಿಗೆ ಕೇವಲ ನಾಲ್ಕೈದು ಕಿ.ಮೀ. ಸಂಚಾರಕ್ಕೆ ಅನಗತ್ಯವಾಗಿ ಹೆಚ್ಚುವರಿ ಹೆಚ್ಚುವರಿ 20 ರೂಪಾಯಿ ತೆತ್ತಬೇಕಾಗಿದೆ ಎಂಬ ಅಸಮಾಧಾನ ಪ್ರಯಾಣಿಕರಿಂದ ವ್ಯಕ್ತವಾಗಿದೆ.