ಗಂಗಾವತಿ:ಮಳೆ ಬಂದಾಗ ಗಂಗಾವತಿಯ ಕ್ರೀಡಾಂಗಣವನ್ನು ಒಮ್ಮೆ ನೋಡಿದ್ರೆ ಸಾಕು ಯಾಕಪ್ಪಾ ಮಳೆ ಎಂಬ ಕೂಗು ಕ್ರೀಡಾಭಿಮಾನಿಗಳಲ್ಲಿ ಬರೋದು ಸಹಜವಾಗಿದೆ.
ಮಳೆ ಬಂದ್ರೆ ಮುಗೀತು ಇಲ್ಲಿನ ಕ್ರೀಡಾಂಗಣ ಸಂಪೂರ್ಣವಾಗಿ ಕೆರೆಯಂತಾಗಿ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಹಾಗೂ ಅಥ್ಲೀಟ್ಗಳ ಬದಲು ಎಮ್ಮೆ, ಹಂದಿಗಳು ನೀರಿನಲ್ಲಿ ಈಜಾಡಿ ಜಾಲಿ ರೈಡ್ ಮಾಡುತ್ತವೆ. ಇಲ್ಲಿನ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಇಲ್ಲಿ ವಾಕಿಂಗ್ ಹಾಗೂ ಜಾಗಿಂಗ್ ಮಾಡೋಕೆ ಹಿಂದೆ ಮುಂದೆ ನೋಡುತ್ತಿದ್ದಾರೆ.
ಮಳೆಗೆ ಕೆರೆಯಂತಾಗಿರುವ ಕ್ರೀಡಾಂಗಣ ಗಂಗಾವತಿಗೆ ಯಾವುದೇ ವಿಐಪಿ ರಾಜಕಾರಣಿಗಳು, ಉದ್ಯಮಿಗಳು ಹೆಲಿಕಾಪ್ಟರ್ನಲ್ಲಿ ಬಂದರೂ ಕೂಡ ಇದೇ ಕ್ರೀಡಾಂಗಣದಲ್ಲಿ ಲ್ಯಾಂಡಿಂಗ್ ಆಗಬೇಕು. ಇಂತಹ ಕ್ರೀಡಾಂಗಣ ಮಳೆ ಬಂತೆಂದರೆ ಅಕ್ಷರಶಃ ಕೆರೆಯಾಗಿ ಮಾರ್ಪಡುತ್ತದೆ. ಇದು ಕ್ರೀಡಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇಡೀ ಮೈದಾನದಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿರೋದ್ರಿಂದ ತನ್ನಷ್ಟಕ್ಕೆ ತಾನೆ ಕ್ರೀಡಾಂಗಣ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಿಕೊಳ್ಳುತ್ತದೆ.
ಈ ಬಗ್ಗೆ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ತಾಲೂಕು ಅಧಿಕಾರಿ ಕೆ.ರಂಗಸ್ವಾಮಿ ಅವರನ್ನು ಕೇಳಿದರೆ, ಕ್ರೀಡಾಂಗಣದ ನಿರ್ವಹಣೆಯೇ ಸವಾಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೈದಾನದ ಸುತ್ತಲೂ ಕಸ-ಕಡ್ಡಿ ಸಂಗ್ರವಾಗಿದೆ. ಜೊತೆಗೆ ರನ್ನಿಂಗ್ ಟ್ರ್ಯಾಕ್ ಸುಧಾರಿಸಲು ಅನುದಾನ ಬೇಕಿದೆ. ಕೇವಲ ಇಲಾಖೆ ಮಾತ್ರವಲ್ಲ ಸಾರ್ವಜನಿಕರು ಕ್ರೀಡಾಂಗಣ ಉಳಿಸಿಕೊಳ್ಳುವ ಮತ್ತು ನಿರ್ವಹಣೆಯ ಬಗ್ಗೆ ಜಾಗೃತಿ ವಹಿಸುವುದು ಅಗತ್ಯವಿದೆ. ದಿನದ 24 ಗಂಟೆಯೂ ಕಾವಲು ಇರಲಾಗದು. ಆಟೋಟಕ್ಕೆ ಬಂದ ಯುವಕರು ಕೆಲ ಬಾರಿ ತಂಪು ಪಾನೀಯ ಸೇವಿಸಿ ಬಾಟಲಿಗಳನ್ನು ಎಸೆಯುತ್ತಾರೆ. ಬೀಡಿ, ಸಿಗರೇಟ್, ಪಾನ್, ಗುಟ್ಕಾದ ಶ್ಯಾಷೆಗಳನ್ನು ಎಸೆಯುತ್ತಾರೆ. ನಮ್ಮ ಮೈದಾನವನ್ನು ಸವಚ್ಛವಾಗಿಟ್ಟುಕೊಳ್ಳಬೇಕು ಎಂಬುದು ಯುವಕರ ಮನಸ್ಸಿನಲ್ಲಿ ಬರಬೇಕು ಎನ್ನುತ್ತಾರೆ.