ಗಂಗಾವತಿ(ಕೊಪ್ಪಳ): ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಅವರ ಪತಿ ಸಂದೀಪ್ ಹಾಗೂ ಸದಸ್ಯ ಎಫ್.ರಾಘವೇಂದ್ರ ಅವರಿಗೆ ಜಾಮೀನು ನೀಡಲು 1ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ. ಶಿವಳ್ಳಿ ನಿಕಾರಿಸಿದ್ದಾರೆ.
ಸೆ.16ರಂದು ತಾಲೂಕಿನ ಶ್ರೀ ಇಂಟರ್ನ್ಯಾಷನಲ್ ಹೋಟೆಲ್ ಮತ್ತು ಬಾರ್ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಂದೀಪ್, ವಂಶಿ, ಮೊಹಮ್ಮದ್, ಗುರು, ವಸಂತ, ಸುಂಕಪ್ಪ ಹಾಗೂ ಇತರರ ಮೇಲೆ ನಗರಠಾಣೆಯಲ್ಲಿ ಹಲ್ಲೆ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾಗಿತ್ತು. ಸೆ.19ರಂದು ಮಂಥನ ಸಭಾಂಗಣದಲ್ಲಿ ನಡೆದಿದ್ದ ನಗರಸಭೆಯ ಸಭೆಯಲ್ಲಿ ಸದಸ್ಯ ಎಫ್.ರಾಘವೇಂದ್ರ, ಪೌರಾಯುಕ್ತ ವಿರೂಪಾಕ್ಷ ಮೇಲೆ ಸಲ್ಲದ ಆರೋಪ ಮಾಡಿ ಸಭೆಯಲ್ಲಿಯೇ ಬೆದರಿಕೆ ಹಾಕಿ ಮತ್ತು ಸಭೆ ಬಳಿಕವೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ರಾಘವೇಂದ್ರ ವಿರುದ್ದ ದೂರು ದಾಖಲಾಗಿತ್ತು.