ಗಂಗಾವತಿ (ಕೊಪ್ಪಳ):ಇಲ್ಲಿನ ಕೃಷ್ಣದೇವರಾಯ ವೃತ್ತದಲ್ಲಿನ ರಸ್ತೆ ಮಧ್ಯೆ ನಗರಸಭೆ ತೋಡಿದ್ದ ಗುಂಡಿಯನ್ನು ಮುಚ್ಚದೇ ಬಿಟ್ಟಿದ್ದರಿಂದ ನಿತ್ಯ ಹಲವು ಸವಾರರು ತೊಂದರೆಗೀಡಾಗುತ್ತಿದ್ದರು. ಇದನ್ನು ಗಮನಿಸಿದ ಆಟೋ ಚಾಲಕರು ಸ್ವಯಂ ಪ್ರೇರಣೆಯಿಂದ ಶ್ರಮದಾನದ ಮೂಲಕ ಗುಂಡಿಗಳನ್ನು ಮುಚ್ಚಿದ್ದಾರೆ.
ನಗರಸಭೆ ನಿರ್ಲಕ್ಷ್ಯಕ್ಕೆ ಅಸಮಾಧಾನ: ರಸ್ತೆಗುಂಡಿ ಮುಚ್ಚಿದ ಆಟೋ ಚಾಲಕರು
ನೀರಿನ ಪೈಪ್ ಅಳವಡಿಕೆಗೆಂದು ತೋಡಿದ್ದ ಗುಂಡಿಯನ್ನು ಮುಚ್ಚದ ನಗರಸಭೆ ವಿರುದ್ಧ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಆ ಗುಂಡಿಗಳನ್ನು ಸ್ವಯಂ ಪ್ರೇರಣೆಯಿಂದ ಶ್ರಮದಾನ ಮಾಡುವ ಮೂಲಕ ಮುಚ್ಚಿದ್ದಾರೆ.
ನೀರಿನ ಪೈಪ್ ಅಳವಡಿಸುವ ಉದ್ದೇಶದಿಂದ ನಗರಸಭೆ ಸಿಬ್ಬಂದಿ, ರಸ್ತೆ ಮಧ್ಯೆ ಸುಮಾರು ಒಂದು ಅಡಿಗಿಂತಲೂ ದೊಡ್ಡ ಪ್ರಮಾಣದ ಗುಂಡಿ ತೋಡಿದ್ದರು. ಆದರೆ ಕಾಮಗಾರಿ ಮುಗಿದ ಬಳಿಕ ಕನಿಷ್ಟ ಪಕ್ಷ ಅದಕ್ಕೆ ಡಾಂಬರ್ ಹಾಕದೇ ಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿತ್ಯ ಈ ಮಾರ್ಗದಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಗುಂಡಿಯನ್ನು ಗಮನಿಸದೇ ಬರುವ ಕೆಲ ವಾಹನ ಸವಾರರು ಬಿದ್ದು ಗಾಯಮಾಡಿಕೊಂಡ ಘಟನೆ ನಡೆದಿವೆ.
ಈ ಬಗ್ಗೆ ಸಾಕಷ್ಟು ಬಾರಿ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಟೋ ಚಾಲಕರು ದೂರಿದ್ದಾರೆ. ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ನಗರಸಭೆಯ ಮಾಡಿದ್ದ ಎಡವಟ್ಟಿನ ಕಾರ್ಯವನ್ನು ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ಶ್ರಮದಾನ ಮಾಡುವ ಮೂಲಕ ಮಣ್ಣಿನಿಂದ ಗುಂಡಿ ಮುಚ್ಚಲು ಯತ್ನಿಸಿದ್ದಾರೆ. ಆದರೆ ಮಳೆ ಬಂದರೆ ಮತ್ತೆ ಗುಂಡಿ ಸೃಷ್ಟಿಯಾಗಲಿದೆ. ನಗರಸಭೆಯ ಅಧಿಕಾರಿಗಳು ಡಾಂಬರ್ ಹಾಕಿಸುವ ಕೆಲಸ ಮಾಡಬೇಕಿದೆ.