ಗಂಗಾವತಿ: ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗಲೆಂಬ ಕಾರಣಕ್ಕಾಗಿ ಸರ್ಕಾರ ಇದೀಗ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಗಂಗಾವತಿ ಹಾಗೂ ಕಾರಟಗಿ ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರವನ್ನು ಆರಂಭಿಸಿದೆ. ಆದರೆ ಸರ್ಕಾರ ತೆರೆದಿರುವ ಈ ಭತ್ತ ಖರೀದಿ ಕೇಂದ್ರದಿಂದ ಯಾವುದೇ ಲಾಭ ರೈತರಿಗೆ ಆಗುತ್ತಿಲ್ಲ. ಬದಲಿಗೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ರೈತರು ಆಕ್ಷೇಪಿಸಿದ್ದಾರೆ.
ಸರ್ಕಾರ ಘೋಷಣೆ ಮಾಡಿರುವ ಬೆಲೆಯಲ್ಲಿ ಅಂದರೆ, ಸಾಮಾನ್ಯ ಭತ್ತ ಕ್ವಿಂಟಲ್ಗೆ ರೂ.1800 ಹಾಗೂ ಗ್ರೇಡ್-ಎಗೆ ರೂ. 1880 ರೈತರಿಗೆ ಆಗುವ ಹಾನಿಯನ್ನು ಸರಿದೂಗಿಸಲಾರದು. ಕನಿಷ್ಠ 2,200 ರಿಂದ 2,300 ರೂಪಾಯಿ ಇದ್ದರೆ ಮಾತ್ರ ರೈತರು ಆರ್ಥಿಕ ಹಾನಿಯಿಂದ ಪಾರಾಗಬಹುದು ಎಂಬುವುದು ರೈತರ ಲೆಕ್ಕಾಚಾರ.