ಗಂಗಾವತಿ (ಕೊಪ್ಪಳ): ಮಹಿಳೆಯರ ಸ್ವಾವಲಂಬನೆಯ ಬದುಕಿಗಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಮೂಲಕ ಮಹಿಳೆಯರಿಗೆ ಉಚಿತ ಸಾರಿಗೆ ಬಸ್ ಸೌಲಭ್ಯ ಲಭ್ಯವಾಗುತ್ತಿದೆ. ಈ ಯೋಜನೆಯಡಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಗಂಗಾವತಿಯ ಮಹಿಳೆಯರು ಈ ಮಹತ್ವಾಕಾಂಕ್ಷಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ನಗರದಿಂದ ಪ್ರತಿನಿತ್ಯ ಬಳ್ಳಾರಿಗೆ ಸಂಚರಿಸುವ ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರಿಗೆ ಯೋಜನೆಯ ಅನುಕೂಲ ಸಿಗುತ್ತಿಲ್ಲ.
ನಗರದಿಂದ ನಿತ್ಯ ಬಳ್ಳಾರಿಗೆ ಬೆಳಗ್ಗೆ 6ರಿಂದ 8.30ರ ವರೆಗೆ ಬಿಐಟಿಎಂ ಕಾಲೇಜಿನ ವಿದ್ಯಾರ್ಥಿನಿಯರು, ಕೃಷ್ಣದೇವರಾಯ ವಿಶ್ವವಿದ್ಯಾಲಯ, ಆರೋಗ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಮಹಿಳಾ ಉದ್ಯೋಗಿಗಳು ಸೇರಿದಂತೆ ನಾನಾ ಇಲಾಖೆಯ ಮಹಿಳಾ ನೌಕರರು ಬಳ್ಳಾರಿಗೆ ಹೋಗುತ್ತಾರೆ.
ಶಕ್ತಿ ಯೋಜನೆ ಜಾರಿಯಾದ ಬಳಿಕವೂ ನಿತ್ಯ ಇವರು ಹಣ ನೀಡಿಯೇ ಪ್ರಯಾಣಿಸಬೇಕಾಗಿದೆ. ಇದಕ್ಕೆ ಕಾರಣ ಇಷ್ಟೇ. ಬೆಳಗ್ಗೆ 5.30ರಿಂದ 8 ಗಂಟೆಯವರೆಗೆ ಗಂಗಾವತಿಯಿಂದ ಬಳ್ಳಾರಿ ಮಾರ್ಗವಾಗಿ ಹೋಗುವ ಎಲ್ಲ ಸಾರಿಗೆ ಬಸ್ಗಳು ಅಂತರ್‌ರಾಜ್ಯಕ್ಕೆ ಹೋಗುತ್ತಿವೆ.
ಹೀಗಾಗಿ ಈ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ. ಗಂಗಾವತಿಯಿಂದ ಬಳ್ಳಾರಿಯತ್ತ ಬೆಳಗ್ಗೆ 5.30ಕ್ಕೆ ಗಂಗಾವತಿ ಬಳ್ಳಾರಿ ಮಧ್ಯೆ ಸಾರಿಗೆ ಬಸ್ ಸೇವೆ ಆರಂಭವಾಗುತ್ತಿದೆ.
ಬೆಳಗ್ಗೆ 5.30ಕ್ಕೆ ಬಳ್ಳಾರಿ ಮಾರ್ಗವಾಗಿ ಮಂತ್ರಾಲಯ, ಬಳಿಕ 6.15ಕ್ಕೆ ಬಳ್ಳಾರಿ ಮಾರ್ಗವಾಗಿ ಅನಂತಪುರ, ಬೆಳಗ್ಗೆ 7 ಗಂಟೆಗೆ ಬಳ್ಳಾರಿ ಮಾರ್ಗವಾಗಿ ಮತ್ತೊಂದು ಅನಂತಪುರಕ್ಕೆ ಹೋಗುವ ಬಸ್ ಇದೆ. 7.15ಕ್ಕೆ ಗಂಗಾವತಿ-ಬಳ್ಳಾರಿ ಮಾರ್ಗವಾಗಿ ಸಂಚರಿಸುವ ಕೊಪ್ಪಳ- ಮಂತ್ರಾಲಯ ಬಸ್ ಇದೆ. ವಾಹನ ಸೇವೆ ಇದೆಯಾದರೂ ಮಹಿಳೆಯರಿಗೆ ಈ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಮಧ್ಯಾಹ್ನ ಒಂದು ಗಂಟೆಯ ನಂತರ ಗಂಗಾವತಿಯತ್ತ ಬರುವ ಬಳ್ಳಾರಿ ಡಿಪೋದ ವಾಹನಗಳ ಸಂಚಾರ ಸ್ಥಗಿತವಾಗುತ್ತದೆ. ಆ ಬಳಿಕ ಅನಿವಾರ್ಯವಾಗಿ ಸಂಜೆಯೂ ಹಣ ನೀಡಿಯೇ ಪ್ರಯಾಣಿಸಬೇಕಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.