ಕರ್ನಾಟಕ

karnataka

ಗಂಗಾವತಿ: ಕೊರೊನಾದಿಂದ ಮಡಿದವನ ಅಂತ್ಯಕ್ರಿಯೆಗೆ ಸ್ಥಳೀಯರಿಂದ ತೀವ್ರ ವಿರೋಧ

By

Published : Jul 9, 2020, 9:20 PM IST

ಕೊರೊನಾ ಸೋಂಕಿಗೀಡಾಗಿದ್ದ 52 ವರ್ಷದ ವ್ಯಕ್ತಿಯ ಮೃತದೇಹವನ್ನು ಯಾವುದೇ ಕಾರಣಕ್ಕೂ ಗ್ರಾಮಕ್ಕೆ ತರಬಾರದು. ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಬಾರದು ಎಂದು ಆಗ್ರಹಿಸಿ ಗಂಗಾವತಿ ತಾಲೂಕಿನ ಹಿರೇಜಂತಕಲ್ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ  ಜನರಿಂದ ತೀವ್ರ ವಿರೋಧ
ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಜನರಿಂದ ತೀವ್ರ ವಿರೋಧ

ಗಂಗಾವತಿ (ಕೊಪ್ಪಳ): ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ಸಮುದಾಯದ ರುದ್ರಭೂಮಿಯಲ್ಲಿ ಮಾಡಬಾರದು ಎಂದು ಆಗ್ರಹಿಸಿ ನೂರಾರು ಜನ ವಿರೋಧ ವ್ಯಕ್ತಪಡಿಸಿದ ಘಟನೆ ತಾಲೂಕಿನ ಹಿರೇಜಂತಕಲ್ ಪ್ರದೇಶದಲ್ಲಿ ನಡೆದಿದೆ.

ಕೊರೊನಾ ಸೋಂಕಿಗೀಡಾಗಿದ್ದ 52 ವರ್ಷದ ವ್ಯಕ್ತಿ ಜುಲೈ 5ರಂದು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂದಿ ಮೃತರ ದೇಹವನ್ನು ಸ್ವಗ್ರಾಮಕ್ಕೆ ಕಳಿಸುವ ವ್ಯವಸ್ಥೆ ಮಾಡಿತ್ತು.

ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಜನರಿಂದ ತೀವ್ರ ವಿರೋಧ

ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಸಿದ್ಧತೆ ಕೈಗೊಳ್ಳಲು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದರು. ಆದರೆ ವ್ಯಕ್ತಿಯ ಸಾವಿನ ಮಾಹಿತಿ ಲಭಿಸುತ್ತಿದ್ದಂತೆ ಸ್ಥಳೀಯರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಗುಂಪುಗೂಡಿ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸೋಂಕಿತನ ಶವ ಗ್ರಾಮಕ್ಕೆ ತರಬಾರದು. ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಬಾರದು ಎಂದು ಪಟ್ಟುಹಿಡಿದರು. ಇದಕ್ಕೆ ನೂರಾರು ಮಹಿಳೆಯರು ಕೂಡ ಧನಿಗೂಡಿಸಿದರು. ಪೊಲೀಸರು ಸಂಧಾನಕ್ಕೂ ಸ್ಥಳೀಯರು ಒಪ್ಪಲಿಲ್ಲ.

ಹೀಗಾಗಿ ಹಿರೇಜಂತಕಲ್ ಪ್ರದೇಶದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ. ಪೊಲೀಸರು ಹಾಗೂ ಸ್ಥಳೀಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಜಿಲ್ಲಾ ಮೀಸಲು ಪಡೆಯ ವಾಹನ ಆಗಮಿಸಿದ್ದು, ಇಲಾಖೆಯ ಅಧಿಕಾರಿಗಳು ಕೋವಿಡ್ ಮಾರ್ಗಸೂಚಿಯಂತೆ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ.

ಹಿರೇಜಂತಕಲ್ ಪ್ರದೇಶದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಹಿನ್ನೆಲೆ ಬಹುತೇಕ ಎಲ್ಲಾ ವಹಿವಾಟುಗಳನ್ನು ವರ್ತಕರು ಸ್ಥಗಿತಗೊಳಿಸಿ ಅಂಗಡಿಗಳನ್ನು ಬಂದ್ ಮಾಡಿದರು. ಆಸ್ಪತ್ರೆ, ಔಷಧಿ ಸೇರಿದಂತೆ ಅಗತ್ಯ ಸೇವೆಗಳೂ ಸಧ್ಯಕ್ಕೆ ಸ್ಥಗಿತವಾಗಿದೆ.

ABOUT THE AUTHOR

...view details