ಗಂಗಾವತಿ(ಕೊಪ್ಪಳ):ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮಗ್ರಿ ಪೂರೈಕೆ ಮಾಡಿದ ಮತ್ತು ಕೆಲಸ ಮಾಡಿದ ಬಿಲ್ ಪಾವತಿಗೆ ಪರ್ಸೆಂಟೇಜ್ (ಕಮಿಷನ್) ಪಡೆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಬಿಲ್ ಪಾವತಿಸದೆ ಸತಾಯಿಸುತ್ತಿದ್ದಾರೆ ಎಂದು ಗುತ್ತಿಗೆದಾರರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಾರಟಗಿ ತಾಲೂಕಿನ ಕುಂಟೋಜಿ ಗ್ರಾಮದ ನಿವಾಸಿ ಯರಿಸ್ವಾಮಿ ನಾಗೇಶಪ್ಪ ಪ್ರಧಾನಿಗೆ ಪತ್ರ ಬರೆದ ಗುತ್ತಿಗೆದಾರ.
2021ನೇ ಸಾಲಿನಲ್ಲಿ ಮುಸ್ಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಾಮಗ್ರಿ ಪೂರೈಸಿದ್ದೇನೆ. ಬಿಲ್ ಪಾವತಿಗೆ ವಿನಾಕಾರಣ ಸತಾಯಿಸಲಾಗುತ್ತಿದೆ. ಕಾರಟಗಿ ಪ್ರಭಾರಿ ಇಓ, ಮುಸ್ಟೂರು ಪಿಡಿಓ ಹಾಗೂ ಗ್ರಾ.ಪಂ. ಅಧ್ಯಕ್ಷ, ನರೇಗಾ ತಾಂತ್ರಿಕ ಸಹಾಯಕ ಭ್ರಷ್ಟರು. ಇವರ ವಿರುದ್ಧ ಜಿಪಂ ಸಿಇಓಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಅವರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸುವಂತೆ ಪತ್ರದಲ್ಲಿ ಪ್ರಧಾನಿ ಅವರನ್ನು ಕೋರಿದ್ದಾರೆ.