ಗಂಗಾವತಿ:ಇಲ್ಲಿನ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ 2021-22ನೇ ಸಾಲಿನ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಲಭಿಸಿದ್ದು, ಸತತ ಮೂರು ಬಾರಿ ಈ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಸರ್ಕಾರಿ ಆಸ್ಪತ್ರೆಯಾಗಿ ದಾಖಲೆ ಬರೆದಿದೆ. ರಾಜ್ಯದ ಆರೋಗ್ಯ ಇಲಾಖೆಯ ಇತಿಹಾಸದಲ್ಲೇ ಗಂಗಾವತಿ ಆಸ್ಪತ್ರೆ ಐತಿಹಾಸಿಕ ಸಾಧನೆ ಮಾಡಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ನೀಡುತ್ತಿರುವ ಗುಣಾತ್ಮಕ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶಕ್ಕೆ ಕೇಂದ್ರ ಸರ್ಕಾರ ಕಾಯಕಲ್ಪ ಪ್ರಶಸ್ತಿ ಜಾರಿಗೆ ತಂದಿದೆ. ಈ ಪ್ರಶಸ್ತಿ 15 ಲಕ್ಷ ರೂಪಾಯಿ ನಗದು ಮತ್ತು ಪಾರಿತೋಷಕ ಒಳಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಅನುಸರಿಸಲಾದ ಮಾನದಂಡದ ಪೈಕಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಆಸ್ಪತ್ರೆಯನ್ನು (96.42 ಅಂಕ) ಹಿಂದಿಕ್ಕಿದ ಗಂಗಾವತಿ ಉಪ ವಿಭಾಗ ಆಸ್ಪತ್ರೆ (98.58 ಅಂಕ) ಪ್ರಶಸ್ತಿಯನ್ನು ದಕ್ಕಿಸಿಕೊಂಡಿದೆ.